ರಾಜ್ಯ ಸುದ್ದಿ

ಎಸ್ಸಿ,ಎಸ್ಟಿ ಮುಂಬಡ್ತಿ ಅ.12ರ ನಂತರ ಜಾರಿ​​​​​​​: ರಾಜ್ಯ ಸರ್ಕಾರ

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿರುವ ಎಸ್‌ಸಿ-ಎಸ್‌ಟಿ ನೌಕರರ ಹಿಂಬಡ್ತಿ ವಿಚಾರದಲ್ಲಿ ಅವರ ಹಿತ ಕಾಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ತತ್ಸಮಾನ ಹುದ್ದೆ ಕಾಯ್ದುಕೊಳ್ಳುವ 2017ರ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಕಾಯ್ದೆ ಜಾರಿ ಮಾಡುವ ಕುರಿತು ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು, ಆದರೂ ಸುಪ್ರೀಂ ಕೋರ್ಟ್‌ನಲ್ಲಿ ಅಕ್ಟೋಬರ್‌ 12 ರಂದು ವಿಚಾರಣೆಗೆ ಬಂದಾಗ ಯಾವುದೇ ತೀರ್ಪು ಬರದಿದ್ದರೂ ಹೊಸ ಕಾಯ್ದೆ ಜಾರಿಗೊಳಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಈ ಕಾನೂನು ಅನುಷ್ಠಾನಗೊಳಿಸದಂತೆ ಸುಪ್ರೀಂ ಕೋರ್ಟ್‌ ಮೌಖೀಕ ಆದೇಶ ನೀಡಿರುವುದರಿಂದ ಈ ಬಗ್ಗೆ ರಾಜ್ಯ ಸರ್ಕಾರದ ಮೇಲೆ ನ್ಯಾಯಾಂಗ ನಿಂದನೆಯ ಆರೋಪ ಬರುವ ಸಾಧ್ಯತೆಯ ಬಗ್ಗೆ ಸಂಪುಟದಲ್ಲಿ ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ಆದರೆ, ಅಡ್ವೋಕೆಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ, ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅಕ್ಟೋಬರ್‌ 12 ರೊಳಗೆ ಸುಪ್ರೀಂ ಕೋರ್ಟ್‌ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಗುರುವಾರ ನಡೆದ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ, ಬಿ.ಕೆ. ಪವಿತ್ರಾ ಪ್ರಕರಣ ಅನುಷ್ಠಾನಗೊಳಿಸದಿರುವ ಕುರಿತು ನ್ಯಾಯಾಂಗ ನಿಂದನೆ ಪ್ರಕರಣ ಅಕ್ಟೊಬರ್‌ 12 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ಯಾವುದೇ ತಿರ್ಪು ನೀಡದಿದ್ದರೂ, ರಾಜ್ಯ ಸರ್ಕಾರ ತಂದಿರುವ ಕಾಯ್ದೆಯನ್ನು ಜಾರಿಗೊಳಿಸಲು ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಬಿ.ಕೆ. ಪವಿತ್ರಾ ಪ್ರಕರಣಕ್ಕೆ ತೀರ್ಪಿನ ಬಗ್ಗೆ ನ್ಯಾಯಾಂಗ ನಿಂದನೆ ಪ್ರಕರಣ ಈಗಾಗಲೇ ಒಂಬತ್ತು ಬಾರಿ ವಿಚಾರಣೆಗೆ ಬಂದಿದ್ದರೂ, ಸುಪ್ರೀಂ ಕೋರ್ಟ್‌ ಮುಂದೂಡುತ್ತಾ  ಬಂದಿದೆ. ಇದರಿಂದ ರಾಜ್ಯ ಸರ್ಕಾರದ ಕಾಯ್ದೆ ಅನುಷ್ಠಾನಕ್ಕೆ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 12ರ ನಂತರ ರಾಜ್ಯ ಸರ್ಕಾರದ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಮುಂಚೆಯೇ ಸುಪ್ರೀಂ ಕೊರ್ಟ್‌ ಗಮನಕ್ಕೆ ತರುವಂತೆ ಅಡ್ವೋಕೆಟ್‌ ಜನರಲ್‌ ಅವರಿಗೆ ತಿಳಿಸಲಾಗಿದೆ. ಸುಪ್ರೀಂ ಕೊರ್ಟ್‌ ಗಮನಕ್ಕೆ ತಂದು ಕಾನೂನು ಜಾರಿಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು. ಕಾನೂನು ಜಾರಿಯಿಂದ ವ್ಯತಿರಿಕ್ತ ಪರಿಣಾಮವಾದರೂ ಸರ್ಕಾರ ಅದನ್ನು ಎದುರಿಸಲು ಸಿದ್ಧವಾಗಿದೆ. ಈಗಾಗಲೇ ಎಂ. ನಾಗರಾಜ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೊರ್ಟ್‌ ತೀರ್ಪು ನೀಡಿದೆ. ಈಗ ಅನಿವಾರ್ಯವಾಗಿ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment