ರಾಜ್ಯ ಸುದ್ದಿ

ಎಸ್.ಸಿ, ಎಸ್.ಟಿ ಅಧಿಕಾರಿಗಳ ಬಡ್ತಿಗೆ ರಾಜ್ಯ ಸಚಿವ ಸಂಪುಟ ಅಸ್ತು

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 6 ಸಾವಿರಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳ ಬಡ್ತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ನಿರಾಕರಿಸಿ ಸುಪ್ರೀಂ ಕೋರ್ಟ್ 2017ರಲ್ಲಿ ಆದೇಶ ನೀಡಿದ ಹಿನ್ನಲೆಯಲ್ಲಿ ಈ ಅಧಿಕಾರಿಗಳಿಗೆ ಹಿಂಬಡ್ತಿ ನೀಡಲಾಗಿತ್ತು. ಕಳೆದ ಸೋಮವಾರ ರಾತ್ರಿ ನಡೆದ ಸಂಪುಟ ಸಭೆ ತಡರಾತ್ರಿಯವರೆಗೆ ಮುಂದುವರಿದಿತ್ತು. 2017ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹುದ್ದೆಯಲ್ಲಿ ಹಿಂಬಡ್ತಿ ನೀಡಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಬಡ್ತಿ ನೀಡಲು ನಿರ್ಧರಿಸಿದೆ. ಆದರೆ ಈ ಬಡ್ತಿಯಿಂದ ಬೇರೆ ಸಮುದಾಯದ ಅಧಿಕಾರಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಪುಟ ನಿರ್ಧರಿಸಿದೆ. ಇದರಿಂದ ಯಾವ ಸಮುದಾಯದ ಅಧಿಕಾರಿಗಳಿಗೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಸುಪ್ರೀಂ ಕೋರ್ಟ್ 2017ರಲ್ಲಿ ಆದೇಶ ನೀಡಿದ ಬಳಿಕ ಈ ವಿಷಯ ರಾಜ್ಯ ಸರ್ಕಾರದ ಮುಂದೆ ಕಾಯ್ದಿರಿಸಲಾಗಿತ್ತು. ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಹಿನ್ನಲೆಯಲ್ಲಿ ಸರ್ಕಾರದ ಈ ನಿರ್ಧಾರ ಮಹತ್ವದ್ದಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಹಿರಿತನ ಮಸೂದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧಿಕಾರಿಗಳಿಗೆ ಬಡ್ತಿ ಮೀಸಲಾತಿಗಳಿಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಇದು ಮುಖ್ಯಮಂತ್ರಿಗಳ ಒಪ್ಪಿಗೆಗೆ ಕಳುಹಿಸಿಕೊಡಲಾಗುತ್ತದೆ. ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ ನಂತರ ಜಾರಿಗೆ ಬರುತ್ತದೆ. ಇದರಿಂದ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು 6 ಸಾವಿರ ಎಸ್ ಸಿ ಎಸ್ ಟಿ ಅಧಿಕಾರಿಗಳಿಗೆ ನೇರವಾಗಿ ಮತ್ತು ಸುಮಾರು 35 ಸಾವಿರ ಅಧಿಕಾರಿಗಳಿಗೆ ಪರೋಕ್ಷವಾಗಿ ಪರಿಣಾಮ ಬೀರಲಿದೆ.

About the author

ಕನ್ನಡ ಟುಡೆ

Leave a Comment