ರಾಜಕೀಯ

ಎ.ಮಂಜು ಒಬ್ಬ ಕಳ್ಳೆತ್ತು, ಪಕ್ಷ ದ್ರೋಹಿ, ಒಂದೇ ಒಂದೂ ಮತ ಹಾಕಬೇಡಿ: ಸಿದ್ದರಾಮಯ್ಯ ವಾಗ್ದಾಳಿ

ಚಿಕ್ಕಮಗಳೂರು: ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಒಬ್ಬ ಕಳ್ಳೆತ್ತು. ಕಳ್ಳೆತ್ತಿಗೆ ಒಂದೇ ಒಂದೂ ಮತ ಹಾಕಬೇಡಿ. ಕಳ್ಳೆತ್ತು ಎಂದು ಗೊತ್ತಿದ್ದರೂ ಸಹ ಮಂಜುಗೆ ಸಚಿವ ಸ್ಥಾನ ನೀಡಲಾಗಿತ್ತು. ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಆದ ಬಳಿಕ ಬಿಜೆಪಿಗೆ ಹೋಗಿದ್ದಾನೆ. ಅವನೊಬ್ಬ ಪಕ್ಷ ದ್ರೋಹಿ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ವಾಗ್ದಾಳಿ ನಡೆಸಿದರು. ಇಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಚಿಕ್ಕಮಗಳೂರು, ಕಡೂರಿನಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಬಳಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಸೇರುವ ಮೂರು ದಿನ ಮೊದಲು ನನ್ನೊಂದಿಗೆ ಭೇಟಿ ಮಾಡಿ ಪಕ್ಷ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ನೀವು ನನಗೆ ಸಚಿವ ಸ್ಥಾನ ನೀಡಿದವರು ಎಂದು ಮಾತುಕೊಟ್ಟು, ಈಗ ಬಿಜೆಪಿ ಸೇರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾನೆ ಎಂದು ಮಂಜು ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲಿ ಚಾಟಿ ಬೀಸಿದರು. ಎಷ್ಟೇ ದೇಶ ಸುತ್ತಿದರೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಶೂನ್ಯವೇ. ಮೋದಿ ಒಬ್ಬ ರೈತ ವಿರೋಧಿ. ಬಿಜೆಪಿಯವರು ತಮ್ಮನ್ನು ತಾವು ಚೌಕಿದಾರ್ ಎಂದು ಹೇಳಿಕೊಳ್ಳಲು ಆರಂಭಿಸಿದ್ದಾರೆ. ಹಾಗೆಯೇ ಜೈಲಿಗೆ ಹೋಗಿ ಬಂದವರೆಲ್ಲರೂ ಚೌಕಿದಾರ್ ಆಗಿಬಿಟ್ಟಿದಾರೆ ಎಂದು ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದರು. ಈ ಹಿಂದೆ ದೇಶದಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಾಗ, ಕಾಂಗ್ರೆಸ್ ಸರ್ಕಾರದಲ್ಲಿ 4 ಬಾರಿ ನಡೆದ ಯುದ್ಧದಲ್ಲಿ ಗೆಲುವು ಸಾಧಿಸಿದಾಗ ಮೋದಿ ಅವರು ಇದ್ದರಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಪಾಕ್ ವಿರುದ್ಧದ ಸೈನಿಕರ ಹೋರಾಟವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

About the author

ಕನ್ನಡ ಟುಡೆ

Leave a Comment