ಕ್ರೀಡೆ

ಐಸಿಸಿ ಏಕದಿನ ಶ್ರೇಯಾಂಕ: ಟೀಂ ಇಂಡಿಯಾಗೆ 2ನೇ ಸ್ಥಾನ, ವಿರಾಟ್ ಕೊಹ್ಲಿ, ಬೂಮ್ರಾ ಅಗ್ರ ಸ್ಥಾನ

ದುಬೈ: ಸತತ ಎರಡು ಏಕದಿನ ಸರಣಿ ಜಯ ಸಾಧಿಸಿದ ಟೀಂ ಇಂಡಿಯಾ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಬಿಡುಗಡೆ ಮಾಡಿದ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಜಸ್ಪ್ರಿತ್ ಬೂಮ್ರಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ನಲ್ಲಿ ಕ್ರಮವಾಗಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಕಳೆದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಐತಿಹಾಸಿಕ ಏಕದಿನ ಸರಣಿ ಜಯಸಿದ ಭಾರತ 122 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, 126 ಅಂಕ ಗಳಿಸಿರುವ ಇಂಗ್ಲೆಂಡ್‌ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಮೂರು ಅರ್ಧ ಶತಕ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಮೂರು ಸ್ಥಾನಗಳಲ್ಲಿ ಏರಿಕೆ ಕಂಡು 17ನೇ ಶ್ರೇಯಾಂಕ ಪಡೆದಿದ್ದಾರೆ.
ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಒಟ್ಟು 12 ವಿಕೆಟ್‌ ಪಡೆದಿದ್ದ ಟ್ರೆಂಟ್‌ ಬೌಲ್ಟ್‌ ಐಸಿಸಿ ಬೌಲಿಂಗ್‌ ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. 29 ವರ್ಷದ ಎಡಗೈ ಬೌಲರ್‌ ಟ್ರೆಂಟ್‌ ಬೌಲ್ಟ್‌, ಭಾರತದ ವಿರುದ್ಧ ನಾಲ್ಕನೇ ಪಂದ್ಯದಲ್ಲಿ 20ಕ್ಕೆ 5 ವಿಕೆಟ್‌ ಕಬಳಿಸಿ ನ್ಯೂಜಿಲೆಂಡ್‌ ಗೆಲುವಿಗೆ ಕಾರಣರಾಗಿದ್ದರು. ಅವರು ಇದೀಗ 7 ಸ್ಥಾನ ಏರಿಕೆ ಕಂಡು ಇದೀಗ ಮೂರನೇ ಶ್ರೇಯಾಂಕ ಪಡೆದಿದ್ದಾರೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
ಕಳೆದ 2016ರ ಜನವರಿಯಲ್ಲಿ ಟ್ರೆಂಟ್‌ ಬೌಲ್ಟ್‌ ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದರು. ಇದೀಗ ಜಸ್ಪ್ರಿತ್‌ ಬೂಮ್ರಾ ಹಾಗೂ ಅಪ್ಘಾನಿಸ್ತಾನದ ಸ್ಪಿನ್ನರ್‌ ರಶೀದ್‌ ಖಾನ್‌ ಅವರ ಹಿಂದೆ ಇದ್ದು, ಅಗ್ರ ಸ್ಥಾನದತ್ತ ಮುನ್ನಡೆಯುತ್ತಿದ್ದಾರೆ. ಕಿವೀಸ್‌ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರು ಒಂದು ಸ್ಥಾನ ಏರಿಕೆಯಾಗಿ ಐದನೇ ಶ್ರೇಯಾಂಕ ಪಡೆದಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್‌ ಅವರು ಆರು ಸ್ಥಾನಗಳಲ್ಲಿ ಜಿಗಿದು 17ನೇ ಸ್ಥಾನ ಪಡೆದಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೇದಾರ್‌ ಜಾದವ್‌ ಅವರು 8 ಸ್ಥಾನ ಜಿಗಿದು 35ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್‌ ಡಿ ಕಾಕ್‌ ಒಂದು ಸ್ಥಾನದಲ್ಲಿ ಏರಿಕೆಯಾಗಿ 8ನೇ ಸ್ಥಾನ, ಹಾಸಿಂ ಆಮ್ಲಾ ಅವರು ಮೂರು ಸ್ಥಾನಗಳಲ್ಲಿ ಏರಿಕೆ ಕಂಡು 13ನೇ ಶ್ರೇಯಾಂಕ ಹಾಗೂ ರೀಝಾ ಹೆನ್ರಿಕ್ಸ್‌ 34 ಏರಿಕೆಯಾಗಿ 94ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬೌಲಿಂಗ್‌ನಲ್ಲಿ ಅಂಡಿಲೆ ಎಂಟು ವಿಕೆಟ್‌ ಪಡೆಯುವ ಮೂಲಕ 13 ಸ್ಥಾನಗಳಲ್ಲಿ ಜಿಗಿದು 19ನೇ ಶ್ರೇಯಾಂಕ ಪಡೆದರು. ಡ್ವೇನ್‌ ಪ್ರೆಟ್ರೋರಿಯಸ್‌ ಅವರು 53 ಸ್ಥಾನ ಏರಿಕೆ ಕಂಡು 44ನೇ ಶ್ರೇಯಾಂಕದಲ್ಲಿದ್ದಾರೆ.
ಇನ್ನು, ಏಕದಿನ ತಂಡದ ಶ್ರೇಯಾಂಕದ ವಿಭಾಗದಲ್ಲಿ ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ 1-4 ಅಂತರದಲ್ಲಿ ಸೋಲು ಅನುಭವಿಸಿದ ನ್ಯೂಜಿಲೆಂಡ್‌ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇದೆ. ನೂತನವಾಗಿ ನೇಪಾಳ ಹಾಗೂ ಯುಎಇ ತಂಡಗಳು ಶ್ರೇಯಾಂಕ ಅಂಕ ಪಟ್ಟಿಯಲ್ಲಿ 15 ಅಂಕಗಳೊಂದಿಗೆ 15ನೇ ಸ್ಥಾನದಲ್ಲಿ ಜಂಟಿಯಾಗಿವೆ.
 

About the author

ಕನ್ನಡ ಟುಡೆ

Leave a Comment