ರಾಜಕೀಯ

ಒಂದು ದಿನವೂ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ: ಮುಖ್ಯಮಂತ್ರಿ ಮತ್ತೆ ಕಣ್ಣೀರು

ಮೈಸೂರು: ಮುಖ್ಯಮಂತ್ರಿ ಆದ ದಿನದಿಂದ ಒಂದು ದಿನವೂ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟಿಲ್ಲ, ತಮ್ಮ ಪಕ್ಷ 120 ಸೀಟ್ ಗೆದ್ದಿದ್ದರೆ ನೆಮ್ಮದಿಯಾಗಿ ಆಡಳಿತ ನಡೆಸುತ್ತಿದ್ದೆ. ಈಗ ಎಂಥಾ ಕಷ್ಟದಲ್ಲಿ ಸರ್ಕಾರ ನಡೆಸುತ್ತಿದ್ದೇನೆ ಎಂದು ನಿಮಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ. ಕೆ.ಆರ್​. ಪೇಟೆಯಲ್ಲಿ ಜೆಡಿಎಸ್​, ಕಾಂಗ್ರೆಸ್ ಜಂಟಿ​ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕಣ್ಣೀರು ಹಾಕುವುದನ್ನು ನಿಲ್ಲಿಸಿದ್ದೆ. ಇಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಕೆಲವು ಮಾತುಗಳನ್ನು ಹೇಳಿದರು.

ಯಾರು ನಿಮ್ಮ ಕಷ್ಟ ಅರ್ಥ ಮಾಡಿಕೊಳ್ಳಲ್ಲ, ನಿನ್ನ ಪರಿಸ್ಥಿತಿ ಯೋಚನೆ ಮಾಡಲ್ಲ, ನಿನ್ನ ಆರೋಗ್ಯ ಮೇಲೆ ಯಾವ ಪರಿಣಾಮ‌ ಬೀರಿದೆ ಅನ್ನುವುದನ್ನು ಯೋಚನೆ ಮಾಡಲ್ಲ ಎಂದು ಹೇಳಿದ ಮಾತುಗಳು ತಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ನೋವು ತಡೆಯಲಿಕ್ಕೆ ಆಗದೆ ನಾನು ಕಣ್ಣೀರು ಹಾಕಿದ್ದೇನೆ” ಎಂದು ಕಣ್ಣೀರು ಸುರಿಸುತ್ತಲೇ ಪಕ್ಷೇತರ ಅಭ್ಯರ್ಥಿ ಬಗ್ಗೆ ಟೀಕಿಸಿದರು.

ಸಿನಿಮಾ ನಟರು ಬಂದು ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಟ ಯಶ್ ಹಾಗೂ ದರ್ಶನ್ ವಿರುದ್ಧ ಕಿಡಿಕಾಡಿದ ಕುಮಾರಸ್ವಾಮಿ, ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡು, ತಾಯಂದಿರು ಕಣ್ಣೀರು ಹಾಕುವಾಗ ಯಾವ ನಟರು ನಿಮಗೆ ಸಾಂತ್ವನ ಹೇಳುವುದಕ್ಕೆ ಬಂದಿದ್ದರಾ? ಇಂದು ಮಂಡ್ಯ ಸ್ವಾಭಿಮಾನ ಎನ್ನುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ರೈತರು ಆತ್ಮಹತ್ಯೆ ಮಾಡಿಕೊಂಡಾಗ ಜಾತಿ, ಧರ್ಮ ನೋಡದೇ ತಾವು ಅವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದೇನೆ. 200 ಕುಟುಂಬಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ  ತಾಯಂದಿರ ಕಷ್ಟ ಕೇಳುವುದಕ್ಕೆ ಯಾರಾದರೂ ಬಂದಿದ್ದಾರೆಯೇ ? ಎಂದು ಪ್ರಶ್ನಿಸಿದ ಅವರು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂದು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

ಪಕ್ಷೇತರ ಅಭ್ಯರ್ಥಿ ಕಣ್ಣಲ್ಲಿ ನೀರು ಹಾಕಿ ನಾಟಕ ಆರಂಭಿಸಿದ್ದಾರೆ. ಆದರೆ, ನಿಜವಾಗಿ ಕಣ್ಣೀರು ಹಾಕುತ್ತಿರುವವರು ನಾನು, ನಮ್ಮ ತಂದೆ. ಜನರ ಸಮಸ್ಯೆ ನೋಡಿ ಕಣ್ಣಲ್ಲಿ  ನೀರು ಬರುತ್ತಿದೆ ಎಂದು ಮತ್ತೊಮ್ಮೆ ಕಣ್ಣೀರು ಒರೆಸುತ್ತಾರೆ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ವರ್ತನೆ ಬಗ್ಗೆ ಟೀಕಿಸಿದರು. ತಾವು ಮೊದಲ  ಬಾರಿ ಮುಖ್ಯಮಂತ್ರಿ ಆದಾಗ, ಡಾ. ರಾಜಕುಮಾರ್ ನಿಧನರಾಗಿದ್ದರು. ಅವರು ನಿಧನರಾದ ಮಾಹಿತಿ ನಮ್ಮ ಗಮನಕ್ಕೆ ತರದೆ ಮಾಧ್ಯಮಕ್ಕೆ ವಿಷಯ ತಿಳಿಸಿದರು. ಅಂದು ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳಲಾಗಲಿಲ್ಲ. ಹೀಗಾಗಿ ಅಂತ್ಯಕ್ರಿಯೆಯ ವೇಳೆ ಹಲವು ಗೊಂದಲವಾಯಿತು ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡರು.

ಅಂಬರೀಶ್ ಅವರನ್ನು ಮೊದಲು ಸಂಸದರನ್ನಾಗಿ ಮಾಡಿದ್ದು ಜನತಾ ಪಕ್ಷ. ಬಳಿಕ ಕಾಂಗ್ರೆಸ್‌ ಗೆ  ಸೇರ್ಪಡೆಯಾದರು. ನಾನು ಅವರಿಗೆ ಏನು ಸಹಾಯ ಮಾಡಿದ್ದೇನೆ. ಅವರು ನನಗೆ  ಏನು ಸಹಾಯ ಮಾಡಿದ್ದಾರೆ ಎಂಬುದು ಈಗ ಅಪ್ರಸ್ತುತ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ಅಂಬರೀಶ್ ಅವರು  ನಿಧನರಾದಾಗ ನನಗೆ ನನ್ನ ಮಗನೇ ಮಾಹಿತಿ ತಿಳಿಸಿದ. ತಾವು ಆಸ್ಪತ್ರೆಗೆ ಹೋದಾಗ ಅಲ್ಲಿ ಇಂದು ಚುನಾವಣೆ ನಡೆಸಲು ಬಂದವರು ಇರಲಿಲ್ಲ. ಅವರು  ವಾಸ ಮಾಡುತ್ತಿದ್ದ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ಆ ಕನಿಷ್ಠ ಸೌಜನ್ಯವಾದರೂ ಅವರಿಗೆ ಇದೆಯಾ ಎಂದು ಸುಮಲತಾ ವಿರುದ್ಧ  ಆಕ್ರೋಶ ಹೊರಹಾಕಿದರು.

About the author

ಕನ್ನಡ ಟುಡೆ

Leave a Comment