ರಾಷ್ಟ್ರ ಸುದ್ದಿ

ಒಂದು ಮೋದಿ ಸರ್ಕಾರ ಮಾತು ತಪ್ಪಿದರೆ ಪದ್ಮಭೂಷಣ ವಾಪಸ್: ಅಣ್ಣಾ ಹಜಾರೆ ಎಚ್ಚರಿಕೆ

ರಾಲೇಗಣಸಿದ್ಧಿ: ಒಂದು ವೇಳೆ ಮೋದಿ ಸರ್ಕಾರ ಮಾತು ತಪ್ಪಿದರೆ ನನಗೆ ನೀಡಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಗೆ ವಾಪಸ್ ನೀಡುತ್ತೇನೆ ಎಂದು ಖ್ಯಾತ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಮ್ಮ ಸ್ವಗ್ರಾಮ ರಾಲೇಗಣಸಿದ್ಧಿಯಲ್ಲಿ ಜ.30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆ ಅವರು, ‘ಕೇಂದ್ರದಲ್ಲಿ ಲೋಕಪಾಲ್‌ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಸ್ಥಾಪಿಸಬೇಕು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನನಗೇನಾದರು ಆದರೆ, ಪ್ರಧಾನಿಯೇ ಹೊಣೆ: ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರ ಅವರು, ‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ನಂಬಿಕೆಯನ್ನು ಸುಳ್ಳು ಮಾಡುತ್ತಿದೆ. ಒಂದು ವೇಳೆ ನನಗೇನಾದರೂ ಆದರೆ ಪ್ರಧಾನಿ ನರೇಂದ್ರ ಮೋದಿಯೇ ಜವಾಬ್ದಾರಿ, ಜನ ಅವರನ್ನೇ ಕೇಳುತ್ತಾರೆ. ಜನ ನನ್ನನ್ನು ಪರಿಸ್ಥಿತಿಯನ್ನು ನಿಭಾಯಿಸಿದ ವ್ಯಕ್ತಿ ಎನ್ನುವ ದೃಷ್ಟಿಯಲ್ಲಿ ನೋಡುತ್ತಾರೆಯೇ ಹೊರತು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದವನು ಎಂದು ಗುರುತಿಸುವುದಿಲ್ಲ. ಒಂದು ವೇಳೆ ನನಗೇನಾದರೂ ಆದರೆ, ಜನರು ಪ್ರಧಾನಿಯನ್ನು ಜವಾಬ್ದಾರನ್ನಾಗಿ ಮಾಡುತ್ತಾರೆ.’
‘ಒಂದು ವೇಳೆ ಲೋಕಪಾಲ್ ಅನುಷ್ಠಾನಗೊಂಡರೆ, ಸರಿಯಾದ ಸಾಕ್ಷ್ಯವಿದ್ದರೆ ಪ್ರಧಾನಿ ವಿರುದ್ಧವೂ ತನಿಖೆ ನಡೆಸಬಹುದು. ಅದೇ ರೀತಿ ಲೋಕಾಯುಕ್ತದ ಮೂಲಕ ಮುಖ್ಯಮಂತ್ರಿ, ಸಚಿವರು ಹಾಗೂ ಎಲ್ಲಾ ಶಾಸಕರನ್ನು ತನಿಖೆ ನಡೆಸುವ ಅವಕಾಶವಿದೆ. ಅದಕ್ಕಾಗಿಯೇ ಅವರು ಇದನ್ನು ಜಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಯಾವ ರಾಜಕೀಯ ಪಕ್ಷಕ್ಕೂ ಈ ಮಸೂದೆ ಬೇಡವಾಗಿದೆ. 2013ರಲ್ಲಿ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಅಂಗೀಕಾರಗೊಂಡಿದೆ. ಆದರೆ, ಸರ್ಕಾರ ಅದನ್ನು ಜಾರಿಗೊಳಿಸಬೇಕಷ್ಟೇ ಎಂದು ಅಣ್ಣಾ ಹಜಾರೆ ಹೇಳಿದರು. 81 ವರ್ಷದ ಹಜಾರೆ ಅವರಿಗೆ 1992ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಭೂಷಣ’ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

About the author

ಕನ್ನಡ ಟುಡೆ

Leave a Comment