ರಾಷ್ಟ್ರ ಸುದ್ದಿ

ಓವೈಸಿ ಹೈದರಾಬಾದ್’ಗಷ್ಟೇ ಸೀಮಿತವಾಗಿರಬೇಕು: ಶಿವಸೇನೆ ನಾಯಕ ಸಂಜಯ್ ರಾವತ್

ಮುಂಬೈ: ಅಸಾದುದ್ದೀನ್ ಓವೈಸಿ ಹೈದರಾಬಾದ್’ಗಷ್ಟೇ ಸೀಮಿತವಾಗಿರಬೇಕು. ರಾಮ ಮಂದಿನರ ಅಯೋಧ್ಯೆಯಲ್ಲಿಯೇ ಹೊರತು ಹೈದರಾಬಾದ್, ಪಾಕಿಸ್ತಾನ ಅಥವಾ ಇರಾನ್ ನಲ್ಲಿ ನಿರ್ಮಾಣಗೊಳ್ಳುವುದಿಲ್ಲ ಎಂದು ಶಿವಸೇನೆ ಶನಿವಾರ ಹೇಳಿದೆ. ದೇಶದ ಆತ್ಮಗೌರವದ ದೃಷ್ಟಿಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅನಿವಾರ್ಯ ಎಂದಿದ್ದ ಮೋಹನ್ ಭಾಗ್ವತ್ ಅವರ ಹೇಳಿಕೆಗೆ ಕೆಲ ದಿನಗಳ ಹಿಂದಷ್ಟೇ ಪ್ರತಿಕ್ರಿಯೆ ನೀಡಿದ್ದ ಓವೈಸಿ, ನಿಮ್ಮನ್ನು ಹಾಗೂ ನಿಮ್ಮ ಸರ್ಕಾರವನ್ನು ಮಂದಿರ ಕಟ್ಟದಂತೆ ತಡೆದಿರುವವರಾದರೂ ಯಾರು?. ಮೋಹನ್ ಭಾಗ್ವತ್ ಅವರ ಹೇಳಿಕೆ ದೇಶ ಏಕಚಕ್ರಾಧಿಪತ್ಯಕ್ಕೆ ಸಿಲುಕಿರುವ ಅತ್ಯುತ್ತಮ ಉದಾಹರಣೆ, ಬಿಜೆಪಿ ಹಾಗೂ ಆರ್ ಎಸ್ಎಸ್ ಏಕಚಕ್ರಾಧಿಪತ್ಯದಲ್ಲಿ, ನಿರಂಕುಶವಾದದಲ್ಲಿ ನಂಬಿಕೆ ಹೊಂದಿದೆ. ಬಿಜೆಪಿ ಹಾಗೂ ಆರ್ ಎಸ್ಎಸ್ ನಾಯಕರಿಗೆ ಬಹುತ್ವ ಹಾಗೂ ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಸಂಜಯ್ ರಾವತ್ ಅವರು, ಅಸಾದುದ್ದೀನ್ ಓವೈಸಿ ಹೈದರಾಬಾದ್ ನಗರಕ್ಕಷ್ಟೇ ಸೀಮಿತವಾಗಿರಬೇಕು, ರಾಮ ಮಂದಿರವನ್ನು ಅಯೋಧ್ಯೆಯಲ್ಲಿ ಹೊರತು ಹೈದರಾಬಾದ್, ಪಾಕಿಸ್ತಾನ್ ಅಥವಾ ಇರಾನ್ ನಲ್ಲಿ ನಿರ್ಮಾಣವಾಗುವುದಿಲ್ಲ. ಓವೈಸಿಯಂತಹ ಜನರು ತಮ್ಮ ರಾಜಕೀಯಗಳಿಂದಾಗಿ ಮುಸ್ಲಿಂ ಸಮುದಾಯದ ಜನರನ್ನು ತಪ್ಪು ಹಾದಿಗೆಳೆಯುತ್ತಿದ್ದಾರೆ. ಇದು ಭವಿಷ್ಯದ ಮೇಲೆ ದೊಡ್ಡ ಹೊಡೆತವನ್ನು ನೀಡಲಿದೆ ಎಂದು ಹೇಳಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತು ಇಂದೇ ಕಾನೂನು ರಚನೆ ಮಾಡಬೇಕು. ಇಲ್ಲದೇ ಹೋದರೆ ಮುಂದೆಂದೂ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ಬಹುಮತವಿದೆ. 2019ರ ಚುನಾವಣೆ ಬಳಿಕ ಪರಿಸ್ಥಿತಿ ಹೇಗಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ರಾಮ ಮಂದಿರ ವಿವಾದವನ್ನು ನ್ಯಾಯಾಲಯದ ಬಗೆಹರಿಸಲು ಸಾಧ್ಯವಿಲ್ಲ. ಇದು ನಂಬಿಕೆಯ ವಿಚಾರ. ರಾಜಕೀಯ ಶಕ್ತಿಗೆ ಸಂಬಂಧಿಸಿದ ವಿಚಾರ. ಮೋದಿ ಜೀಯವರು ಅದನ್ನು ಮಾಡಬಹುದು ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment