ಅಂಕಣಗಳು

ಓ ಬಾಲ್ಯವೇ ಮರಳಿ ಬಾ 

ನಾನಾಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ ಅನ್ನಿಸುತ್ತೆ.  ನಮ್ಮ ಊರಿಗೆ ಕವಲೆತ್ತು (ಗಂಗೆತ್ತು) ಆಡಿಸುವವರು ಬಂದಿದ್ದರು.   ಸಂಜೆಗೆ ಊರಿನ ಜನ ಜಮಾಯಿಸಲಿ ಎಂದು ಕಾಯುತ್ತಿದ್ದರು.   ನಮ್ಮ ಸರ್ಕಾರಿ ಶಾಲಾ ಆವರಣವೇ ಅವರ ಆಟದ ಅಡ್ಡವಾಗಿತ್ತು . ನಮಗೆ ಮನರಂಜನೆಯ ಆಟ ನೋಡಬಹುದೆಂದು ಖುಷಿಯೋ ಖುಷಿ .  ಶಾಲೆ ಬಿಟ್ಟಿತ್ತು.  ಮನೆಗೆ ಹೋಗಿ ಸ್ವಲ್ಪ ಸಮಯದ ನಂತರ ಸಮವಸ್ತ್ರ ಬದಲಾಯಿಸಿ ಸ್ವಲ್ಪ ಹೊತ್ತು ಕಳೆದು ಅಮ್ಮನಿಗೆ ಹೇಳಿ (ಅಪ್ಪ ಕಳಿಸಲ್ಲ ಅದಕ್ಕೆ) ನಾನು ಅಣ್ಣ, ತಂಗಿ, ತಮ್ಮ ಎಲ್ಲರೂ ಓಡಿದ್ದೆವು.  ಅಲ್ಲಿ ಶಾಲಾ ಗೆಳೆಯ ಗೆಳತಿಯರಾದ ನಾಗು (ನಾಗರತ್ನ), ಮೈಥಿಲಿ, ಜಯಶ್ರೀ, ದೇವಾ, ಸುಧಾಕರ, ಎಲ್ಲರೂ ಸಿಕ್ಕರು ಖುಷಿಯೇ ಖುಷಿ ಮಹಾ ಗಲಾಟೆ ಗಲಿಬಿಲಿ ಚಿಲಿಪಿಲಿ ..!! ಕವಲೆತ್ತು ಆಡಿಸುವುದನ್ನು ನೋಡಲು ಮಕ್ಕಳ ಸಂತೆಯೇ ಸೇರಿತ್ತು.   ಆಟ ಶುರುವಾಯಿತು,  ಸೀತಮ್ಮ ಆಕಳ ಹೆಸರು ..!! ಆಟ ನಮಗೆ ಅರ್ಥ ಆಗಲಿಲ್ಲವಾದರೂ ಅವರ ಡೈಲಾಗ್ …ಅದಕ್ಕೆ ಜನರಿಂದ ಬರುತ್ತಿದ್ದ ಚಪ್ಪಾಳೆ, ಓಹೋ ಗಳು ಮತ್ತು ಎಲ್ಲಕ್ಕೂ ಹೆಚ್ಚಾಗಿ  ಡೋಲು ಅದರ ತಾಳ ಕಿವಿಗೆ ಮತ್ತು ಮನಸ್ಸಿಗೆ ಕುಣಿಯುವಂತೆ ಮಾಡಿದ್ದವು.   ಆಟ ಮುಗಿದು ಎಲ್ಲರಿಂದ ಹಣ ಪಡೆಯುತ್ತಿದ್ದರು ..ನಮಗೆ ಮನೆಯ ನೆನಪಾಗಿದ್ದು ಆಗಲೇ ..!! ಅಣ್ಣ ಕರೆದ ಏಯ್ ..ಬನ್ನಿ ಎಲ್ಲರೂ  ಮನೆಗೆ ಹೋಗೋಣ ..! ಹ ..ಆಗ ಅಪ್ಪಾಜೀ ನೆನಪಾಗಿ ಭಯ ಆವರಿಸಿತು .   ಎಲ್ಲ ಮಕ್ಕಳು ಅವರವರ ಮನೆ ಕಡೆ ಓಡಿದೆವು .  ನಾನು ಮತ್ತು ಅಣ್ಣಾ  ಮನೆ ಮುಂದೆ ಬರುವಷ್ಟರಲ್ಲಿ ಗೇಟ್ ಲಾಕ್ ಆಗಿತ್ತು .  ಆಗ ಬಾಗಿಲಿನಂತ ಗೇಟ್ ಇತ್ತು . ಇಬ್ಬರೂ ಹೆದರಿಕೆಯಿಂದ ಮೆಲ್ಲನೆ ಬಾಗಿಲು ತಟ್ಟಿದೆವು.   ನಿಶ್ಯಬ್ದ ….!! ಯಾರೂ ಮಾತನಾಡಲಿಲ್ಲ ..ಅಮ್ಮಾ ..ಅಮ್ಮಾ.ಎಂದು ಕೂಗಿದೆವು.ಹು ಹೂಂ….!! ಕೊನೆಗೆ ಬಾಗಿಲು ತೆರೆಯಿತು ..ಎಲ್ಲರಿಗೂ ಪೆಟ್ಟು ಬಿತ್ತು ..ಎರಡು-ಮೂರು ಗೋಣಿಚೀಲ ಕೊಟ್ಟು
” ಮನೆಯ ನೆನಪು ನಿಮಗೆ ಮರೆತುಹೋಗಿತ್ತಾ .ಓದಿಲ್ಲ ,ಬರೆದಿಲ್ಲ .
ಕವಲೆತ್ತು ನೋಡಲು ಹೋಗಿದ್ದೀರ?  ಅವರ ಜೊತೆ ಊರು ತಿರುಗಲು ಹೋಗಿ ಎಂದು ಬೈದರು ..!! ಇಲ್ಲೆ ಮಲಗ್ರೀ ಈ ವರಾಂಡದಲ್ಲಿ ಗೋಣಿಚೀಲದ ಮೇಲೆ” ಅಂತ ಒಳಗಿನ ಬಾಗಿಲು ಹಾಕ್ಕೊಂಡರು ..!!ನಾವು ಯಾವಾಗ ನಿದ್ರೆ ಮಾಡಿದೆವೋ ಗೊತ್ತಾಗಲಿಲ್ಲ …ಆದರೆ ಬೆಳಗ್ಗೆ ಎದ್ದಾಗ ಒಳಗಡೆ ಮಲಗಿದ್ದೆವು. !!!

 

 ವಿಶಾಲಾ ಆರಾಧ್ಯ

About the author

Pradeep Kumar T R

Leave a Comment