ರಾಜ್ಯ ಸುದ್ದಿ

ಕನ್ನಡದ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ನಿಧನ

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಶನಿವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕೋ. ಚೆನ್ನಬಸಪ್ಪ ಅವರನ್ನು ಎಂ ಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋ.ಚೆನ್ನಬಸಪ್ಪ ಅವರಿಗೆ 97 ವರ್ಷವಾಗಿದ್ದು, ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡು ನಂತರ ನ್ಯಾಯದೀಶರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಕೋ. ಚೆನ್ನಬಸಪ್ಪ ವಿದ್ಯಾರ್ಥಿ ದೆಸೆಯಲ್ಲಿಯೇ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ, ಸೆರೆವಾಸ ಅನುಭವಿಸಿದ್ದರು.

ಕುವೆಂಪು ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಕೋ. ಚೆನ್ನಬಸಪ್ಪ, 1922ರ ಫೆ. 21ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದ ಆಲೂರು ಗ್ರಾಮದಲ್ಲಿ ಬಸಮ್ಮ ಮತ್ತು ಕೋಣನ ವೀರಣ್ಣ ದಂಪತಿ ಪುತ್ರನಾಗಿ ಜನಿಸಿದರು.

ಕಾನಮಡುಗುವಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಬಳ್ಳಾರಿಯಲ್ಲಿ ಪ್ರೌಢಶಿಕ್ಷಣ, ಅನಂತಪುರದಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಇದೇ ಸಂದರ್ಭದಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಕೋ. ಚೆ. ಭಾಗವಹಿಸಿದ್ದರು. ಬಳಿಕ ಬಿ.ಎ. ಪದವಿ, ಬೆಳಗಾವಿ ಕಾಲೇಜಿನಿಂದ ಕಾನೂನು ಪದವಿ ಪಡೆದು ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮುಂಬಯಿ ಹೈಕೋರ್ಟ್‌ನಲ್ಲಿ 1947ರಲ್ಲಿ ವಕೀಲಿ ನೋಂದಣಿ ಮಾಡಿಕೊಂಡು, ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದ ಕೋ.ಚೆನ್ನಬಸಪ್ಪ ಅವರು, ರಾಜ್ಯ ಹೈಕೋರ್ಟ್‌ನಲ್ಲೂ ವಕೀಲಿ ವೃತ್ತಿ ನಡೆಸಿದ್ದರು.

ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ಕವನ ಸಂಕಲನಗಳು, ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಕೋ. ಚೆನ್ನಬಸಪ್ಪ ಅವರು ರಚಿಸಿದ್ದ ಪ್ರಮುಖ ಕಥಾ ಸಂಕಲನಗಳು. ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಅವರ ಕಾದಂಬರಿಗಳಾಗಿದ್ದು, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳನ್ನು ಕೂಡ ರಚಿಸಿದ್ದರು. ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಅವರ ನಿಧನಕ್ಕೆ ಸಾಹಿತ್ಯ ಲೋಕ ಕಂಬನಿ ಮಿಡಿದ್ದಿದ್ದು, ಹಲವು ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment