ಅಂಕಣಗಳು

ಕನ್ನಡ ಮಾಧ್ಯಮ ಉಳಿವಿಗಾಗಿ ಹೊಸ ಆಲೋಚನೆ

                 ಮೊದಲ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ರಾಜ್ಯಸರ್ಕಾರದ ಪ್ರಯತ್ನಕ್ಕೆ ಸುಪ್ರೀಂ ಕೋರ್ಟಿನಲ್ಲಿ ಸೋಲಾಗಿ ಕೆಲವರ್ಷಗಳೇ ಕಳೆದಿವೆ. ಇಲ್ಲಿಯವರೆಗೂ ರಾಜ್ಯ ಸರ್ಕಾರ ಈ  ವಿಷಯದಲ್ಲಿ ತನ್ನ ನಿಲುವೇನು, ಮುಂದಿನ ನಿಲುವೇನು ಅನ್ನುವ ಬಗ್ಗೆ ಒಂದು ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗಿಲ್ಲ. ಇದರ ನಡುವೆಯೇ ಹಾದಿಗೊಂದು ಬೀದಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆಗಳು ಹುಟ್ಟಿಕೊಳ್ಳುತ್ತಿವ.
                    ಇಂಗ್ಲಿಷ್ ಮಾಧ್ಯಮವೇ ತಮ್ಮ ಮಕ್ಕಳ ಒಳ್ಳೆಯ ಭವಿಷ್ಯಕ್ಕೆ ಇರುವ ಏಕೈಕ ದಾರಿ ಅನ್ನುವ ಮಾರುಕಟ್ಟೆಯ ಪ್ರಚಾರಕ್ಕೆ   ಬಲಿಯಾಗಿರುವ ಪೋಷಕರು ಈ ಶಾಲೆಗಳಲ್ಲಿ ಲಕ್ಷಗಟ್ಟಲೇ ಹಣ ಸುರಿದು ತಮ್ಮ ಮಕ್ಕಳನ್ನು ಸೇರಿಸುತ್ತಲೂ ಇದ್ದಾರೆ. ಜನಮರುಳೋ, ಜಾತ್ರೆ ಮರುಳೋ ಅನ್ನುವಂತೆ ಸಾಗುತ್ತಿರುವ ಈ ಬೆಳವಣಿಗೆ ಇನ್ನೊಂದು ಇಪ್ಪತ್ತೈದು ವರ್ಷದಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತದ ಭಾಷೆಗಳ ಮುಂದೆ ಬಹಳ ದೊಡ್ಡ ಅಸ್ತಿತ್ವದ ಸವಾಲು ತಂದು ನಿಲ್ಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನಗರಗಳ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಬಹುತೇಕ ಮಕ್ಕಳಿಗೆ ತಮ್ಮ ತಾಯ್ನುಡಿಯಲ್ಲಿ ಸ್ಪಷ್ಟವಾಗಿ ಮಾತನಾಡಲಾಗಲಿ, ಓದಿ-ಬರೆಯಲಾಗಲಿ ಬರುತ್ತಿಲ್ಲ.
                 ಶಿಕ್ಷಣ ಒಂದು ನಾಡಿನ ಏಳಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಈ ದಿನದಲ್ಲಿ  ಸಾಮಾಜಿಕ ನ್ಯಾಯದ ಕಲ್ಪನೆಯಲ್ಲಿ ಶಿಕ್ಷಣವನ್ನು ನೋಡುವ ಎಡ ಸಿದ್ಧಾಂತದವರಾಗಲಿ  ಸಾಂಸ್ಕೃತಿಕ ನೆಲೆಯ ರಾಷ್ಟ್ರೀಯತೆ ಪ್ರತಿಪಾದಿಸುವ ಬಲಪಂಥೀಯರಿಗಾಗಲಿ ಶಿಕ್ಷಣದ ವಿಷಯದಲ್ಲಿ ಭಾರತೀಯ ಭಾಷೆಗಳು ಸೋತರೆ ಆಗುವ ದುರಂತಗಳ ಕಲ್ಪನೆ ಸ್ಪಷ್ಟವಾಗಿ ಇದ್ದಂತೆ ಕಾಣುತ್ತಿದೆ. ನಿರಾಸೆಯ ಕಾರ್ಮೋಡ ಕವಿಯುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಮಾಧ್ಯಮಕ್ಕೆ ಜೀವ ತುಂಬಲು ಈ ಎರಡು ಅಂಶಗಳು ಬೇಕಿವೆ.
೧. ಮಾತೃ ಭಾಷೆಯ ಮಹತ್ವದ ಬಗ್ಗೆ ಜನ ಜಾಗೃತಿ
ಸಿಂಗಾಪುರ, ಹಾಂಗ್ ಕಾಂಗಿನಂತಹ ಸಿಟಿ ಸ್ಟೇಟ್ಸ್ ಬಿಟ್ಟರೆ ಜಗತ್ತಿನ ಮುಂದುವರೆದ ಎಲ್ಲ ದೇಶಗಳು ತಮ್ಮ ಮಾತೃಭಾಷೆಯಲ್ಲೇ ಶಿಕ್ಷಣದ ವ್ಯವಸ್ಥೆ ಹೊಂದಿವೆ.  ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ಮಗುವಿನ ಮಾನಸಿಕ ಬೆಳವಣಿಗೆಗೂ, ಅದರ ಚಿಂತನೆಯನ್ನು ಹಿಗ್ಗಿಸುವುದಕ್ಕೂ ಸಹಕಾರಿ ಎಂದು ವಿಶ್ವಸಂಸ್ಥೆಯೂ ಹೇಳುತ್ತಾ ಬಂದಿದೆ. ಜಗತ್ತಿನ ಬಹುತೇಕ ಮನಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಮಗುವಿಗೆ ತಿಳಿದಿರುವ ಭಾಷೆಯಲ್ಲಿ ಮೊದಲ ಹಂತದ ಶಿಕ್ಷಣ ಕಲ್ಪಿಸುವುದು ಅತ್ಯಂತ ಸರಿಯಾದ ಹೆಜ್ಜೆ ಅನ್ನುವುದನ್ನು ಸಾರಿ ಸಾರಿ ಹೇಳಿದ್ದಾರೆ. ಕನ್ನಡ ನಾಡಿನ ದೊಡ್ಡ ದೊಡ್ಡ ಸಾಧನೆಗೈದ ವಿಜ್ಞಾನಿಗಳು, ಚಿಂತಕರು, ಇಂಜಿನಿಯರ್, ರಾಜಕಾರಣಿಗಳು, ಅಧಿಕಾರಿಗಳು ಕನ್ನಡ ಮಾಧ್ಯಮದಲ್ಲೇ ತಮ್ಮ ಕಲಿತವರು. ಹೀಗಿದ್ದಾಗಲೂ ಮಾತೃಭಷೆಯ ಶಿಕ್ಷಣದ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಪನಂಬಿಕೆಯನ್ನು  ಹೋಗಲಾಡಿಸಲು ಸತ್ಯವೇನು ಅನ್ನುವುದನ್ನು ಜನರಿಗೆ ತಿಳಿಸುವ ದೊಡ್ಡ ಮಟ್ಟದ ಜನ ಜಾಗೃತಿ ಈಗ ನಡೆಯಬೇಕಿದೆ. ಈ ಕೆಲಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಸ್ಥೆಗಳು ಕೈ ಜೋಡಿಸಬೇಕು.೨. ಕನ್ನಡ ಮಾಧ್ಯಮಗಳ ಶಾಲೆಗಳಲ್ಲಿ ಪೋಷಕರ ಪಾಲ್ಗೊಳ್ಳುವಿಕೆ

         ಇವತ್ತಿಗೂ ಕರ್ನಾಟಕದ 71 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಸರ್ಕಾರವೂ ವರ್ಷಕ್ಕೆ 17,000 ಕೋಟಿಯಷ್ಟು ಹಣವನ್ನು ಶಿಕ್ಷಣಕ್ಕೆಂದೇ ಮೀಸಲಿಡುತ್ತಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ಪರಿಣಾಮವಾಗಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಕಳಪೆಯಾಗಿದೆ. ಇದೊಂದು ಬಗೆಹರಿಸಲಾಗದ ಸಮಸ್ಯೆಯೇನಲ್ಲ. ಆದರೆ ಇದು ಕನ್ನಡ ಮಾಧ್ಯಮದಲ್ಲಿ ಓದಿಸುವ, ಓದಿಸಬೇಕೆಂದಿರುವ ಸಾಮಾನ್ಯ ಪೋಷಕರಿಂದ ಬದಲಾಯಿಸುವಂತದ್ದಲ್ಲ. ಅದಕ್ಕೆ ಸಾಂಸ್ಥಿಕ ಸ್ವರೂಪದ, ವ್ಯವಸ್ಥೆಯ ಮಟ್ಟದ ಬದಲಾವಣೆಗಳು ಬೇಕಿದೆ.

ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಪೋಷಕರ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಮಹತ್ವವಿದೆ. ಫೀಸ್ ಕಟ್ಟುವ ಪೋಷಕರು ತಾವು ಕಟ್ಟುವ ಹಣಕ್ಕೆ ತಕ್ಕ ಸೌಲಭ್ಯಗಳು, ಗುಣಮಟ್ಟದ ಕಲಿಕೆ ತಮ್ಮ ಮಕ್ಕಳಿಗೆ ಖಾತರಿ ಪಡಿಸುವತ್ತ ಶಾಲೆಯ ಆಡಳಿತದ ಜೊತೆ ಹೆಚ್ಚಿನ ಸಮನ್ವಯ ಹೊಂದುವ ಅವಕಾಶಗಳನ್ನು ಹೊಂದಿದ್ದಾರೆ. ಇಂತಹದೊಂದು ಸಾಧ್ಯತೆ ಕನ್ನಡ ಮಾಧ್ಯಮದ, ವಿಶೇಷವಾಗಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಲ್ಲೂ ವ್ಯವಸ್ಥಿತವಾಗಿ ದೊರೆಯಬೇಕಿದೆ. ಕನ್ನಡ ಮಾಧ್ಯಮದ ಬಗ್ಗೆ ಗಟ್ಟಿಯಾದ ನಂಬಿಕೆಯಿದ್ದು, ಕನ್ನಡ ಮಾಧ್ಯಮದಲ್ಲೇ ಗುಣಮಟ್ಟದ ಕಲಿಕೆ ಕಲ್ಪಿಸಲು, ಎಲ್ಲ ರೀತಿಯ ಪಠ್ಯ ಮತ್ತು ಪಠ್ಯತೇರ ಚಟುವಟಿಕೆಗಳನ್ನು ಕಲ್ಪಿಸಲು ತಗಲುವ ತಕ್ಕ ದರವನ್ನು ತೆರಲು ಸಿದ್ಧವಿರುವ ಸಾವಿರಾರು ಪೋಷಕರು ಕರ್ನಾಟಕದಲ್ಲಿದ್ದಾರೆ. ಶಾಲೆಗಳಲ್ಲಿರುವ ಸವಲತ್ತು, ಸೌಕರ್ಯಗಳೇನು, ಶಾಲೆಗಳ ಬೇಡಿಕೆಗಳೇನು ಮತ್ತು ಪೋಷಕರಾಗಿ ಶಾಲೆಗಳಿಂದ ತಮಗಿರುವ ನಿರೀಕ್ಷೆಗಳೇನು ಅನ್ನುವ ಬಗ್ಗೆ ಶಾಲೆಗಳ ಆಡಳಿತ ವರ್ಗದ ಜೊತೆ ಕೂತು ಚರ್ಚಿಸುವ ಮತ್ತು ತಕ್ಕ ಪರಿಹಾರದ ಕ್ರಮಗಳನ್ನು ರೂಪಿಸಿಕೊಳ್ಳುವ ವ್ಯವಸ್ಥೆಯೊಂದು ಇಂದು ಏರ್ಪಡಬೇಕಿದೆ. ಇದು ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳನ್ನು ಬಲಪಡಿಸಿಕೊಳ್ಳುವತ್ತ ಒಂದು ಪ್ರಮುಖ ಹೆಜ್ಜೆಯಾಗಬಹುದು.

ಮಲ್ಲಿಕಾಜುನ ಸ್ವಾಮಿ ಹಿರೇಮಠ
ಕರಡಕಲ್

About the author

ಕನ್ನಡ ಟುಡೆ

Leave a Comment