ರಾಷ್ಟ್ರ ಸುದ್ದಿ

ಜಮ್ಮು ಮತ್ತು ಕಾಶ್ಮೀರ: ಅಂತ್ಯ ಸಂಸ್ಕಾರಕ್ಕೂ ಮುನ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ ಹುತಾತ್ಮ ಯೋಧನ ಪತ್ನಿ

ಜಮ್ಮು ಮತ್ತು ಕಾಶ್ಮೀರ: ಭಯೋತ್ಪಾದಕರೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ್ದ ಪತಿಯ ಚಿತೆಗೆ ಅಗ್ನಿ ಸ್ಪರ್ಶವಾಗಲು ಕೆಲವೇ ಕ್ಷಣಗಳು ಬಾಕಿಯಿರುವಾಗ ಆ ಯೋಧನ ಪತ್ನಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
36  ವರ್ಷದ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ರಂಜೀತ್ ಸಿಂಗ್ ದಂಪತಿಗೆ 10 ವರ್ಷಗಳ ಬಳಿಕ ಮಗು ಹುಟ್ಟಿದ್ದು ಮಗುವಿನ ಮುಖವನ್ನು ನೋಡದೇ ರಂಜೀತ್ ಸಿಂಗ್ ಹುತಾತ್ಮರಾಗಿದ್ದು ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುಕೋರರ ವಿರುದ್ಧ ನಡೆದ ಎನ್ ಕೌಂಟರ್ ನಲ್ಲಿ ರಂಜೀತ್ ಸಿಂಗ್ ಹುತಾತ್ಮರಾಗಿದ್ದರು. ರಂಜೀತ್ ರ ಪಾರ್ಥಿವ ಶರೀರ ಸೋಮವಾರ ಸುಲಿಗಾಮ್ ಗ್ರಾಮಕ್ಕೆ ಬಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಗಳವಾರ ಬೆಳಗ್ಗೆ ಇವರ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ನಡೆದಿತ್ತು. ಈ ಮಧ್ಯೆ ಸೋಮವಾರ ಮಧ್ಯರಾತ್ರಿ ವೇಳೆಗೆ ರಂಜೀತ್ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳಗ್ಗೆ ಪತಿಯ ಚಿತೆಗೆ ಅಗ್ನಿ ಸ್ಪರ್ಶ ಆಗುವ ಸ್ವಲ್ಪ ಹೊತ್ತಿಗೆ ಮುಂಚೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನವಜಾತ ಶಿಶು ಹಾಗೂ ಬಾಣಂತಿಯನ್ನು ಆ್ಯಂಬುಲೇನ್ಸ್ ನಲ್ಲಿ ಕರೆದೊಯ್ದು ಪತಿಯ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಶಿಶುವನ್ನು ಹಿಡಿದು ಪತಿಯ ಪಾರ್ಥಿವ ಶರೀರದ ಮುಂದೆ ಪತ್ನಿ ನಿಂತಿದ್ದ ಹೃದಯ ವಿದ್ರಾವಕ ದೃಶ್ಯವನ್ನು ನೋಡಿ ಅಲ್ಲಿದ್ದವರ ಕಣ್ಣಾಲಿಗಳು ತುಂಬಿ ಬಂದವು.

About the author

ಕನ್ನಡ ಟುಡೆ

Leave a Comment