ದೇಶ ವಿದೇಶ

ಕರ್ತಾರ್‌ಪುರ ಕಾರಿಡಾರ್‌ ಯೋಜನೆ ಪಾಕ್‌ ಸೇನೆಯ ದೊಡ್ಡ ಪಿತೂರಿ: ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌

ಚಂಡೀಗಢ: ಕರ್ತಾರ್‌ಪುರ ಕಾರಿಡಾರ್‌ ಯೋಜನೆಯು ಐಎಸ್‌ಐ ನ ಒಳಸಂಚಾಗಿದೆ. ಇದು ಭಾರತದ ವಿರುದ್ಧ ಪಾಕ್‌ ಸೇನೆ ನಡೆಸುತ್ತಿರುವ ದೊಡ್ಡ ಪಿತೂರಿಯಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಆರೋಪಿಸಿದ್ದಾರೆ.

ಪಂಜಾಬ್‌ನಲ್ಲಿ ಉಗ್ರ ಚಟುವಟಿಕೆಗಳನ್ನು ಹೆಚ್ಚಿಸಲು ಪಾಕಿಸ್ತಾನ ಮುಂದಾಗಿದ್ದು, ಅದರ ಪ್ರತಿ ನಡೆ ಬಗ್ಗೆಯೂ ಎಲ್ಲರೂ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. ‘ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಕಮರ್‌ ಜಾವೇದ್‌ ಬಜ್ವಾ ಅವರು ಕರ್ತಾರ್‌ಪುರ ಕಾರಿಡಾರ್‌ ತೆರೆಯುವ ಕುರಿತು ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರಿಗೆ ತಿಳಿಸಿದ್ದರು,” ಎಂದು ಇದೇ ವೇಳೆ ಅಮರಿಂದರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

”ವಿನಾಕಾರಣ ಸಿಧು ಅವರ ವಿಷಯವನ್ನು ದೊಡ್ಡದಾಗಿ ಬಿಂಬಿಸಲಾಯಿತು. ಇದು ಐಎಸ್‌ಐ ನ ಒಳಸಂಚನ್ನು ಅರಿಯಲು ವಿಫಲವಾಗುವಂತೆ ಮಾಡಿತು. ಅಲ್ಲದೇ ಸಿಧು ಅವರೊಂದಿಗೆ ನನ್ನ ಸಂಬಂಧದ ಕುರಿತು ಸುಖಾಸುಮ್ಮನೆ ವಿವಾದವನ್ನು ಮಾಡಲಾಯಿತು,” ಎಂದು ಅಕಾಲಿದಳ ಮತ್ತು ಕೇಂದ್ರ ಬಿಜೆಪಿ ನಾಯಕರನ್ನು ಪಂಜಾಬ್‌ ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಮೂಲಕ ಸಾರ್ವಜನಿಕ ಗಮನವನ್ನು ಬೇರೆಡೆಗೆ ವರ್ಗಾಯಿಸುವ ಪಾಕಿಸ್ತಾನದ ಒಳಸಂಚು ಸಫಲವಾಯಿತು. ಪಂಜಾಬ್‌ನಲ್ಲಿ ಉಗ್ರ ಕೃತ್ಯಗಳನ್ನು ಹೆಚ್ಚಿಸಲು, ಈ ಮೂಲಕ ರಾಜ್ಯವನ್ನು ಅಸ್ಥಿರಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಅಮರಿಂದರ್‌ ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment