ರಾಷ್ಟ್ರ ಸುದ್ದಿ

ಕರ್ನಾಟಕದ ಲಿಂಗಾಯತ ಸಂಸದರು ಅಯೋಗ್ಯರು: ಮಾತೆ ಮಹಾದೇವಿ

ಹೊಸದಿಲ್ಲಿ: ಲಿಂಗಾಯತ ಹಿಂದು ಧರ್ಮದ ಅಂಗವಲ್ಲ, ಸ್ವತಂತ್ರ ಧರ್ಮ ಎಂದು ಹೇಳುತ್ತಿದ್ದರೂ ರಾಜ್ಯದ ಲಿಂಗಾಯತ ಧರ್ಮದ ಶಿಫಾರಸು ನಿರಾಕರಿಸಲು ಕೇಂದ್ರಕ್ಕೆ ಯಾವ ಹಕ್ಕಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಮಹಾದೇವಿ
ದಿಲ್ಲಿಯಲ್ಲಿ ನಡೆದ ಲಿಂಗಾಯತ ಸಮಾವೇಶದ ಎರಡನೇ ದಿನದ ಸರ್ವಧರ್ಮ ಸಮನ್ವಯ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ”ಹಿಂದೂ ಧರ್ಮದ ಶೋಷಣೆಯಿಂದ ಹೊರ ಬಂದ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದ. ಹೀಗಾಗಿಯೇ ನಮ್ಮದು ಸ್ವತಂತ್ರ ಧರ್ಮವಾಗಿದೆ,”ಎಂದರು

”ಲಿಂಗಾಯತೇತರ ಸಂಸದರು ಪ್ರತ್ಯೇಕ ಧರ್ಮಕ್ಕೆ ಬೆಂಬಲಿಸಲು ಮುಂದಾಗಿದ್ದಾರೆ. ಆದರೆ, ಲಿಂಗಾಯತ ಕೋಟಾದಲ್ಲಿ ಟಿಕೆಟ್‌ ಪಡೆದು ಗೆದ್ದವರಿಗೇ ಧರ್ಮಾಭಿಮಾನ ಇಲ್ಲ. ಅವರೆಲ್ಲ ಅಯೋಗ್ಯರು,”ಎಂದು ಕಿಡಿಕಾರಿದರು. ”ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಯಡಿಯೂರಪ್ಪ ರಾಧಾಕೃಷ್ಣ ಮಂದಿರಕ್ಕೂ, ಸಿದ್ದರಾಮಯ್ಯ ಸಿದ್ದರಾಮೇಶ್ವರ ದೇವಸ್ಥಾನಕ್ಕೂ ಹೋಗುತ್ತಾರೆ. ಹಾಗಾದರೆ ಯಾರು ಲಿಂಗಾಯತರು, ಬಸವತತ್ವ ಅಭಿಮಾನಿಗಳು ಎಂಬುದನ್ನು ಎಲ್ಲರು ಅರಿತುಕೊಳ್ಳಬೇಕು,” ಎಂದರು. ಮಹಾರಾಷ್ಟ್ರದ ಲಾತೂರ ಸಂಸದ ಸುನೀಲ ಗಾಯಕವಾಡ ಧ್ವಜಾರೋಹಣ ಮಾಡಿ ಮಾತನಾಡಿ, ”ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡುವಂತೆ ಅಧಿವೇಶನದಲ್ಲಿ ಮಾತನಾಡುತ್ತೇನೆ,”ಎಂದರು.

ಕೊಲ್ಲಾಪುರ ಸಂಸದ ರಾಜು ಶೆಟ್ಟಿ ಮಾತನಾಡಿ, ”ಕೇಂದ್ರ ಸರ್ಕಾರ ಬುದ್ಧ, ಮಹಾವೀರ, ಗುರುನಾನಕರಿಗೆ ಗೌರವ ಕೊಟ್ಟಂತೆ ಬಸವಣ್ಣನಿಗೂ ಕೊಡಬೇಕು,”ಎಂದು ಆಗ್ರಹಿಸಿದರು. ಸಮಾರಂಭದಲ್ಲಿ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು, ನಿಜಗುಣಾನಂದ ಸ್ವಾಮೀಜಿ, ದಯಾನಂದ ಸ್ವಾಮೀಜಿ, ರಾಜೇಶ್ವರಾನಂದ ಸ್ವಾಮೀಜಿ, ಮಹಾನಂದ ತಾಯಿ, ಅಕ್ಕ ಅನ್ನಪೂರ್ಣ, ಬಸವಜಯಮೃತ್ಯುಂಜಯ ಸ್ವಾಮೀಜಿ, ಮಧುಮಯಾನಂದ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ ಮುಂತಾದವರು ಇದ್ದರು.

“ಲಿಂಗಾಯತ ಧರ್ಮದ ಮಾನ್ಯತೆ ಶಿಫಾರಸು ಮತ್ತೊಮ್ಮೆ ಪರಿಶೀಲಿಸುವಂತೆ ಆಗ್ರಹಿಸಿ ಡಿಸೆಂಬರ 12ರ ಬೆಳಗ್ಗೆ 10 ಗಂಟೆಗೆ ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲಾಗುವುದು.”

ಮಾತೆ ಮಹಾದೇವಿ, ಪೀಠಾಧ್ಯಕ್ಷೆ, ಬಸವ ಧರ್ಮ ಪೀಠ, ಕೂಡಲಸಂಗಮ

“ಲಿಂಗಾಯತ ಸ್ವತಂತ್ರ ಧರ್ಮದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ವಿಷಾದನೀಯ. ಹಿಂದೆ ವೀರಶೈವ ಧರ್ಮದ ಸ್ವತಂತ್ರ ಸ್ಥಾನಮಾನಕ್ಕೆಂದು ಕಳುಹಿಸಿದಾಗ ನೀಡಲಾದ ಕಾರಣಗಳ ದಾರಿಯಲ್ಲೇ ಈ ಪ್ರಸ್ತಾವನೆಯನ್ನೂ ಹಿಂದಿರುಗಿಸಲಾಗಿದೆ”

ಡಾ. ಶಿವಮೂರ್ತಿ ಮುರುಘಾ ಶರಣರು, ಚಿತ್ರದುರ್ಗ

About the author

ಕನ್ನಡ ಟುಡೆ

Leave a Comment