ರಾಷ್ಟ್ರ ಸುದ್ದಿ

ಕರ್ನಾಟಕದ ಸಿನಿಮಾವೊಂದು ದೇಶದಾದ್ಯಂತ ಬಿರುಗಾಳಿ ಎಬ್ಬಿಸಿದೆ: ಜಾರ್ಖಂಡ್ ಐಎಎಸ್ ಅಧಿಕಾರಿ

ರಾಂಚಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ದೇಶದೆಲ್ಲೆಡೆ ಹಾರಿಸುತ್ತಿರುವಂತೆಯೇ ಅತ್ತ ಜಾರ್ಖಂಡ್ ಐಎಎಸ್ ಅಧಿಕಾರಿಯೊಬ್ಬರೂ ಕೂಡ ಕೆಜಿಎಫ್ ಚಿತ್ರವನ್ನು ಹಾಡಿ ಹೊಗಳಿದ್ದಾರೆ.
ಹೌದು.. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಚಿತ್ರಗಳನ್ನು ಗಡಿ ದಾಟಿಸಿ ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಪಸರಿಸುವಂತೆ ಮಾಡಿದ ಕೆಜಿಎಫ್ ಚಿತ್ರ ತಂಡಕ್ಕೆ ಜಾರ್ಖಂಡ್ ಐಎಎಸ್ ಅಧಿಕಾರಿ ರಾಜೇಶ್ವರಿ ಅವರು ಧನ್ಯವಾದ ಹೇಳಿದ್ದಾರೆ. ಜಾರ್ಖಂಡ್​​ನಲ್ಲಿ ಐಎಎಸ್​ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಶ್ವರಿ ಅವರು ಕರ್ನಾಟಕದ ಮೂಲದವರು ಮತ್ತು ಕನ್ನಡತಿ ಎಂಬುದು ನಮಗೆ ಹೆಮ್ಮೆಯ ವಿಚಾರವಾದರೆ, ಕನ್ನಡ ಚಿತ್ರವೊಂದು ಜಾರ್ಖಂಡ್ ನಲ್ಲಿ ಹವಾ ಸೃಷ್ಟಿಸಿದೆ ಎಂದು ರಾಜೇಶ್ವರಿ ಅವರು ಹೆಮ್ಮೆ ಪಡುತ್ತಿದ್ದಾರೆ. ಸದ್ಯ ಜಾರ್ಖಂಡ್ ನ ರಾಮ್​ಘಡ್​​​ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ವರಿ ಅವರು ಕೆಜಿಎಫ್ ಚಿತ್ರವನ್ನು ವೀಕ್ಷಿಸಿ ಚಿತ್ರ ತಂಡಕ್ಕೆ ಶುಭಾಶಯ ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು, ‘ನಾನು ರಾಂಚಿಯಲ್ಲಿ ಕೆಜಿಎಫ್​ ಸಿನಿಮಾ ನೋಡಿ ತುಂಬಾ ಸಂತೋಷಗೊಂಡಿದ್ದೇನೆ. ಈ ಸಿನಿಮಾವನ್ನ ಕನ್ನಡದಲ್ಲಿ ನೋಡಲು ಇಷ್ಟ. ಆದರೂ ಹಿಂದಿ ವರ್ಷನ್​​ ಸಿನಿಮಾ ನೋಡಿ ತುಂಬಾ ಎಂಜಾಯ್​ ಮಾಡಿದೆ. ಕೊನೆಗೂ ಕರ್ನಾಟಕದ ಸಿನಿಮಾವೊಂದು ದೇಶದಾದ್ಯಂತ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ. ಯಶ್ ಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲೆಂದು ಆಶಿಸುತ್ತೇನೆ. ಇಡೀ ತಂಡಕ್ಕೆ ಈ ಕೀರ್ತಿ ಸಲ್ಲುತ್ತದೆ ಎಂದು ರಾಜೇಶ್ವರಿ ಬರೆದುಕೊಂಡಿದ್ದಾರೆ. ಐಎಎಸ್ ಅಧಿಕಾರಿ ರಾಜೇಶ್ವರಿ ಅವರ ಟ್ವೀಟ್ ಗೆ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್ ಅವರೂ ಕೂಡ ಪ್ರತಿಕ್ರಿಯಿಸಿದ್ದು, ರಾಜೇಶ್ವರಿ ಅವರಿಗೆ ಧನ್ಯವಾದ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment