ರಾಜ್ಯ ಸುದ್ದಿ

ಕರ್ನಾಟಕ ಉಪ ಚುನಾವಣೆ: ಮತದಾನದ ವಿಡಿಯೋ ಮಾಡಿ ಪೊಲೀಸರ ಅತಿಥಿಯಾದ

ಬಳ್ಳಾರಿ: ಕರ್ನಾಟಕ ಉಪ ಚುನಾವಣೆ ಮುಕ್ತಾಯವಾಗಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರಿಗೆ ಮತ ನೀಡಿ ಫೋಟೋ ಕ್ಲಿಕ್ಕಿಸಿಕೊಂಡ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಳ್ಳಾರಿಯ ಹೊಸಪೇಟೆಯಲ್ಲಿ ಮತದಾನದ ವೇಳೆ ಮೊಬೈಲ್ ತೆಗೆದುಕೊಂಡು ಮತಗಟ್ಟೆಗೆ ತೆರಳಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಬಂಧಿತವ್ಯಕ್ತಿಯನ್ನು ಬಳ್ಳಾರಿ ಮೂಲದ ರಜಾಕ್ ಎಂದು ಗುರುತಿಸಲಾಗಿದೆ. ಮತಗಟ್ಟೆ ಸಂಖ್ಯೆ 62ರ ಇವಿಎಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಕುರಿತು ಸಾಕ್ಷಿಗಾಗಿ ರಜಾಕ್ ಫೋಟೋ ಸೆರೆಹಿಡಿದಿದ್ದ. ಅಲ್ಲದೇ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ತೋರಿಸಲು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಈ ಕುರಿತು ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರ ಅನ್ವಯ ಪೊಲೀಸರು ರಜಾಕ್ ನನ್ನು ಬಂಧಿಸಿದ್ದಾರೆ. ರಹಸ್ಯ ಮತದಾನ ನಿಯಮ ಉಲ್ಲಂಘಿಸಿದ ಹಿನ್ನೆಲೆಯ ಆರೋಪದಲ್ಲಿ ರಜಾಕ್ ಬಂಧನವಾಗಿದೆ. ನಿಯಮಗಳ ಅನ್ವಯ ಮತಗಟ್ಟೆಯಲ್ಲಿ ಮೊಬೈಲ್ ತೆಗೆದುಕೊಂಡು ಹೋಗಲು ನಿಷೇಧವಿದೆ. ಬಳ್ಳಾರಿಯಂತೆಯೇ ಮಂಡ್ಯದಲ್ಲೂ ಇಂತಹುದೇ ಘಟನೆ ನಡೆದಿದ್ದು, ಬಿಜೆಪಿ ಅಭ್ಯರ್ಥಿಗೆ ಮತ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಷೇಧದ ನಡುವೆಯೂ ಮೊಬೈಲ್ ತೆಗೆದುಕೊಂಡು ಹೋಗಿರುವ ಮತದಾರರೊಬ್ಬ ಬಹಿರಂಗಗೊಳಿಸಿದ್ದಾರೆ. ಆದರೆ ಆ ವ್ಯಕ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

About the author

ಕನ್ನಡ ಟುಡೆ

Leave a Comment