ರಾಜ್ಯ ಸುದ್ದಿ

ಕರ್ನಾಟಕ ಬಜೆಟ್ 2019: ರಕ್ತನಿಧಿ ಕೇಂದ್ರಗಳ ಸ್ಥಾಪನೆ, ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು

ಬೆಂಗಳೂರು: ರಕ್ತ ಸಂಗ್ರಹಣೆ, ಶೇಖರಣೆ ಮತ್ತು ವಿತರಣೆಗಾಗಿ ನಾಲ್ಕು ವಿಭಾಗೀಯ ಮಾದರೀ ರಕ್ತನಿಧಿ ಕೇಂದ್ರಗಳ ಸ್ಥಾಪನೆಗೆ 2019-20ನೇ ಸಾಲಿನ ಬಜೆಟ್ ನಲ್ಲಿ 10 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಏತನ್ಮಧ್ಯೆ ದೊಡ್ಡಬಳ್ಳಾಪುರ ತಾಲ್ಲೂ ಆಸ್ಪತ್ರೆಯನ್ನು 250 ಹಾಸಿಗೆಗಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 10 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಡಿ ಎನ್ ಬಿ ಕೇಂದ್ರಗಳ ಆರಂಭ:- ತಜ್ಞರ ಕೊರತೆ ನೀಗಿಸುವ ದೃಷ್ಟಿಯಿಂದ ಆಯ್ದ 11 ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಡಿ ಎನ್ ಬಿ ಕೇಂದ್ರಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ಇದಲ್ಲದೆ ವಿಜಯಪುರ ಜಿಲ್ಲೆಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಸೌಲಭ್ಯವುಳ್ಳ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ಕ್ರೀಡಾ ರೋಗಿಗಳ ವಿಭಾಗ: ಬೆಂಗಳೂರಿನ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಕ್ರೀಡಾ ರೋಗಿಗಳ ವಿಭಾಗ ಪ್ರಾರಂಭವಾಗಲಿದೆ.  ಹಾಗೂ ರೋಬೋಟಿಕ್ ಶಸ್ತ್ರ ಚಿಕಿತ್ಸೆ ಸೌಲಭ್ಯ ಒದಗಿಸಲು 10 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ 60 ಕೋಟಿ ರೂ.: ತುಮಕೂರಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭಿಸುವುದಾಗಿ 2019-20ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಬೆಂಗಳೂರು, ಮಂಡ್ಯ, ಗುಲ್ಬರ್ಗಾ, ಧಾರವಾಡ, ಬೆಳಗಾಂ, ಶಿವಮೊಗ್ಗ, ಮಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಹಲವು ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಿದ್ದು, ಕರ್ನಾಟಕವು ಕ್ಯಾನ್ಸರ್ ಚಿಕಿತ್ಸೆಯ ತಾಣ ಎನಿಸಿಕೊಂಡಿದೆ. ಇನ್ನು ಮುಂದೆ ಈ ಸಾಲಿಗೆ ತುಮಕೂರಿನ ಆಸ್ಪತ್ರೆ ಹೊಸ ಸೇರ್ಪಡೆಯಾಗಲಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ 950 ಕೋಟಿ ರೂ– ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ 950 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.ಈ ಯೋಜನೆಗೆ ಕೇಂದ್ರ ಸರ್ಕಾರ 409 ಕೋಟಿ ರೂ. ಅನುದಾನ ನೀಡಿದೆ.

About the author

ಕನ್ನಡ ಟುಡೆ

Leave a Comment