ರಾಜ್ಯ ಸುದ್ದಿ

ಕಲಬುರಗಿಯಲ್ಲಿ ಪ್ರತ್ಯೇಕ ಉರ್ದು ವಿವಿ ಸ್ಥಾಪನೆ ಪ್ರಸ್ತಾವ ತಿರಸ್ಕರಿಸಿದ ಸರಕಾರ

ಬೆಂಗಳೂರು: ಕಲಬುರಗಿಯಲ್ಲಿ ಪ್ರತ್ಯೇಕ ಉರ್ದು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು, ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು ನೀಡಿದ ಅಭಿಪ್ರಾಯ ಆಧರಿಸಿ ಸರಕಾರ ಈ ತೀರ್ಮಾನ ಕೈಗೊಂಡಿದೆ. ಈ ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಹೈದರಾಬಾದ್‌ ಮುಸ್ಲಿಂ ಜಾಗೃತಿ ಸಮಿತಿಯು ಕಲಬುರಗಿಯಲ್ಲಿ ಉರ್ದು ವಿವಿ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಉನ್ನತ ಶಿಕ್ಷಣ ಇಲಾಖೆಯ ಮುಂದಿಟ್ಟಿತ್ತು. ಕರ್ನಾಟಕ ಉನ್ನತ ಶಿಕ್ಷಣ ಪರಿತ್ತಿನಲ್ಲಿ ಇತ್ತೀಚೆಗೆ ನಡೆದ ರಾಜ್ಯದ ಎಲ್ಲ ವಿವಿಗಳ ಕುಲಪತಿಗಳ ಪರಿಶೀಲನಾ ಸಭೆಯಲ್ಲಿ ಈ ಪ್ರಸ್ತಾವನೆ ಕೈಬಿಡಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಉರ್ದು ಕೋರ್ಸ್‌ಗಳಿರುವಾಗ ಪ್ರತ್ಯೇಕ ಉರ್ದು ವಿಶ್ವವಿದ್ಯಾಲಯ ಸ್ಥಾಪಿಸುವ ಅಗತ್ಯವಿಲ್ಲ ಎಂದು ಬಹುತೇಕ ವಿವಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

”ಈ ಹಿಂದಿನ ಸರಕಾರ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಮುಂದೆ ಈ ಪ್ರಸ್ತಾವ ಮುಂದಿಟ್ಟಿತ್ತು. ಕುಲಪತಿಗಳ ಸಲಹೆ ಆಧರಿಸಿ ಈ ಪ್ರಸ್ತಾವನೆ ಕೈಬಿಡಲಾಗಿದೆ” ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ. ‘ಪ್ರತ್ಯೇಕ ಉರ್ದು ವಿವಿ ಸ್ಥಾಪನೆ ಬದಲಿಗೆ ಹಾಲಿ ವಿವಿಗಳಲ್ಲಿ ಉರ್ದು ವಿಭಾಗಕ್ಕೆ ಸೇರ್ಪಡೆಯಾಗುವವರ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಕಡೆಗಳಲ್ಲಿ ಕೋರ್ಸ್‌ನ ಬಲವರ್ಧನೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಲಪತಿಗಳಿಗೆ ಸೂಚಿಸಲಾಗಿದೆ” ಎಂದು ಅವರು ತಿಳಿಸಿದರು. ಕಲಬುರ್ಗಿ ವಲಯದಲ್ಲಿ ಉರ್ದು ಮಾತನಾಡುವವರ ಸಂಖ್ಯೆ ಹೆಚ್ಚಿರುವುದರಿಂದ ಪ್ರತ್ಯೇಕ ವಿವಿ ಸ್ಥಾಪಿಸಿ, ಭಾಷೆಯ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಹೈದರಾಬಾದ್‌ ಮುಸ್ಲಿಂ ಜಾಗೃತಿ ಸಮಿತಿಯು ಈ ಹಿಂದಿನ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

About the author

ಕನ್ನಡ ಟುಡೆ

Leave a Comment