ರಾಜ್ಯ ಸುದ್ದಿ

ಕಷ್ಟದಲ್ಲಿದ್ದ ಯುವಕನ ಜೀವನಕ್ಕೆ ಬೆಳಕಾದ ಬಡವರ ಬಂಧು

ಬೆಂಗಳೂರು: ಟವಲು ಹಾಗೂ ಹೂವು ಮಾರಿ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದ ಬೀದಿ ವ್ಯಾಪಾರಿಗೆ ಸರ್ಕಾರದ ಮಹತ್ವಾಕಾಂಕ್ಷಿ ‘ಬಡವರ ಬಂಧು’ ಯೋಜನೆ ಸೌಲಭ್ಯ ತಲುಪಿಸುವಲ್ಲಿ ಸ್ವತಃ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಆಸಕ್ತಿ ವಹಿಸಿದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ಬೀದಿಬದಿ ಹಾಗೂ ತಳ್ಳುವ ಬಂಡಿ ವ್ಯಾಪಾರಿಗಳನ್ನು ಬಡ್ಡಿ ಮಾಫಿಯಾದಿಂದ ವಿಮುಕ್ತಗೊಳಿಸಲು ರಾಜ್ಯ ಸರ್ಕಾರ ಬಡವರ ಬಂಧು ಯೋಜನೆ ಜಾರಿ ಮಾಡಿದೆ. ಜನವರಿ 30ರಂದು ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ಬರ ಅಧ್ಯಯನಕ್ಕೆಂದು ಸಚಿವರು ತೆರಳುತ್ತಿದ್ದಾಗ, ನಗರದ ಗೊರೆಗುಂಟೆಪಾಳ್ಯದ ಸಿಗ್ನಲ್ ನಲ್ಲಿ ಕಾರು ನಿಂತ್ತಿತ್ತು. ಆಗ ತಾನೇ ಟವಲ್ ಮಾರಿಕೊಂಡು ಬಂದ 19 ವರ್ಷದ ಕಳಕಯ್ಯ ಸ್ವಾಮಿ ಎಂಬಾತ ಕಾರಿನಲ್ಲಿದ್ದ ಸಚಿವರನ್ನು ಕಂಡು ‘ಬಡವರ ಬಂಧು’ ಎಂದು ಕೂಗುವ ಮೂಲಕ ಅವರ ಗಮನ ತನ್ನತ್ತ ಸೆಳೆದ. ಬೀದಿ ವ್ಯಾಪಾರಿಯಾದ ತಾನು ಕಷ್ಟದಲ್ಲಿದ್ದು, ಬಡ್ಡಿ ವ್ಯಾಪಾರಿಗಳಿಂದ ಶೇ.15ರಷ್ಟು ಬಡ್ಡಿ ದರದಲ್ಲಿ ಹಣ ಪಡೆದಿರುವುದಾಗಿ ಆತ ತಿಳಿಸಿದ. ತಕ್ಷಣ ಸಚಿವರು ಯುವಕನ ಮೊಬೈಲ್ ಸಂಖ್ಯೆ ಪಡೆದರು. ನಂತರ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಂತೆ, ಸಂಬಂಧಿಸಿದ ಅಧಿಕಾರಿಗಳಿಗೆ ಯುವಕನ ಮೊಬೈಲ್ ನಂಬರ್ ನೀಡಿ ಸಂಪೂರ್ಣ ಮಾಹಿತಿ ಪಡೆಯಲು ಸೂಚಿಸಿದರು.
ಇಂದು ವಿಕಾಸಸೌಧದಲ್ಲಿ ವ್ಯಾಪಾರಿ ಕಳಕಯ್ಯ ಸ್ವಾಮಿ ಅವರಿಗೆ ಬಡವರ ಬಂಧು ಯೋಜನೆಯಡಿ ಸಚಿವರು10 ಸಾವಿರ ರೂ.ಚೆಕ್ ವಿತರಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಯೋಜನೆಯನ್ನು ನೆನೆದು ಸ್ವತಃ ಸಚಿವರು ಸಹ ಭಾವುಕರಾದದ್ದು ಕಂಡು ಬಂತು.

About the author

ಕನ್ನಡ ಟುಡೆ

Leave a Comment