ರಾಷ್ಟ್ರ ಸುದ್ದಿ

ಕಾಂಗ್ರೆಸ್​ನ ರಫೇಲ್​ ಆರೋಪ ದಾಳಿ ಬಗ್ಗೆ ಮೌನ ಮುರಿದು ಲೋಕಸಭೆಯಲ್ಲಿ ಅಬ್ಬರಿಸಿದ ಮೋದಿ

ನವದೆಹಲಿ: ರಫೇಲ್​ ವಿಚಾರವಾಗಿ ಚರ್ಚೆಗೆ ಕರೆದರೆ ಮೋದಿ ಅವರು ಪುಕ್ಕಲರಂತೆ ಓಡಿಹೋಗುತ್ತಾರೆ ಎಂಬ ಕಾಂಗ್ರೆಸ್​ನ ಆರೋಪ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮೌನ ಮುರಿದಿದ್ದು, ಇಂದು ಲೋಕಸಭೆಯಲ್ಲಿ ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸರಿಸುಮಾರು ಒಂದೂವರೆ ಗಂಟೆಗಳ ಕಾಲ ಲೋಕಸಭೆಯಲ್ಲಿ ಭಾಷಣ ಮಾಡಿದ ಮೋದಿ, ಕಾಂಗ್ರೆಸ್​ನ ನಡೆ ಮತ್ತು ಅದರ ಇತಿಹಾಸ ಕೆದಕಿ ತೀವ್ರ ಟೀಕೆ ಮಾಡಿದರು. ರಫೇಲ್​ ವಿಚಾರವಾಗಿ ಆರೋಪ ಮಾಡುತ್ತಿರುವ ಕಾಂಗ್ರೆಸ್​, ದೇಶದ ಸೇನೆಯನ್ನು ಬಲಪಡಿಸುವ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದೆ. ಯಾರ ಹಿತಕ್ಕಾಗಿ ಕಾಂಗ್ರೆಸ್​ ರಫೇಲ್​ ಒಪ್ಪಂದವನ್ನು ರದ್ದುಪಡಿಸಲು ಕಾಯುತ್ತಿದೆ ಎಂದು ಪ್ರಶ್ನೆ ಮಾಡಿದರು.

ರಫೇಲ್​ ಆರೋಪಗಳಿಗೆ ಸಂಬಂಧಿಸಿದಂತೆ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಈಗಾಗಲೇ ಉತ್ತರಿಸಿದ್ದಾರೆ. ಒಪ್ಪಂದದ ಪ್ರಕ್ರಿಯೆಗಳನ್ನೆಲ್ಲ ಸುಪ್ರೀಂ ಕೋರ್ಟ್​ ಅಧ್ಯಯನ ಮಾಡಿದೆ. ಆದರೂ, ನಮ್ಮ ಸೇನೆಯನ್ನು ಬಲಪಡಿಸುವ ಉದ್ದೇಶವಿಲ್ಲದ ಕಾಂಗ್ರೆಸ್​ ಒಪ್ಪಂದಕ್ಕೆ ವಿರೋಧಿಸುತ್ತಿದೆ ಎಂದು ಆರೋಪಿಸಿದರು. ನಾನು ಕಾಂಗ್ರೆಸ್​ನ ಮೇಲೆ ಗಂಭೀರ ಆರೋಪ ಮಾಡುತ್ತಿದ್ದೇನೆ. ಯಾರ ಹಿತಕ್ಕಾಗಿ ನೀವು ಈ ಒಪ್ಪಂದ ರದ್ದು ಮಾಡಲು ಹವಣಿಸುತ್ತಿದ್ದೀರಿ. ಯಾವ ಕಂಪನಿಗಾಗಿ ನೀವು ಈ ಆಟ ಆಡುತ್ತಿದ್ದೀರಿ. ನೀವು ಈ ದೇಶದ ಸೇನೆಯನ್ನು 30 ವರ್ಷಗಳಿಂದ ನಿಶ್ಶಸ್ತ್ರಗೊಳಿಸಿದ್ದಿರಿ ಎಂದು ಆರೋಪಿಸಿದರು.

ಕಾಂಗ್ರೆಸ್​ನಲ್ಲಿರುವ ನನ್ನ ಸ್ನೇಹಿತರು ಎರಡು ಯುಗಗಳನ್ನು ನೋಡಿದ್ದಾರೆ. ಒಂದು BC-Before Congress, ಮತ್ತೊಂದು AD-After Dynasty. BC ಯಲ್ಲಿ ಏನೂ ಆಗಿರಲಿಲ್ಲ. ಆದರೆ, ADಯಲ್ಲಿ ಎಲ್ಲವೂ ಆಗುತ್ತಿರುವುದನ್ನು ಆ ನನ್ನ ಸ್ನೇಹಿತರು ನೋಡುತ್ತಿದ್ದಾರೆ ಎಂದು ಛೇಡಿಸಿದರು.

ತಮ್ಮ ಮಾತಿನ ನಡುವೆಯೇ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಾಲೆಳೆದ ಮೋದಿ ” ಇಂದು ಖರ್ಗೆ ಅವರು ಒಂದು ಮಾತು ಹೇಳಿದರು. ಮೋದಿ ಸಾವರ್ಜನಿಕವಾಗಿ ಏನನ್ನು ಹೇಳುತ್ತಾರೋ, ಅಧ್ಯಕ್ಷರು ಲೋಕಸಭೆಯ ಒಳಗೆ ಅದನ್ನೇ ಪುನರುಚ್ಚರಿಸುತ್ತಾರೆ ಎಂದು. ಇದು ನಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಪ್ರಾಮಾಣಿಕವಾಗಿ ನಡೆದುಕೊಳ್ಳುವವರ ಸತ್ಯದ ಮಾತುಗಳು ಸಂಸತ್​ನ ಒಳ-ಹೊರಗೆ ಕೇಳುತ್ತದೆ. ನಾವು ಎಲ್ಲ ಕಡೆಗಳಲ್ಲೂ ಸತ್ಯವನ್ನೇ ಮಾತನಾಡುತ್ತೇವೆ ಎಂಬುದನ್ನು ಸಾಕ್ಷೀಕರಿಸಿದ ಖರ್ಗೆ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಆದರೆ, ಸತ್ಯವನ್ನು ಆಲಿಸದಿರುವುದು ಅವರಲ್ಲಿನ ಲೋಪ ಎಂದು ಖರ್ಗೆ ಅವರನ್ನು ಮೋದಿ ಕೆಣಿಕಿದರು.

ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಮೋದಿ, ” ಪ್ರಧಾನಿ ಈ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು (ವಿಪಕ್ಷಗಳು) ಆರೋಪಿಸುತ್ತಾರೆ. ಒಂದು ಮಾತಿದೆ, ಕಳ್ಳ ಕಾವಲುಗಾರನನ್ನು ನಿಂದಿಸಿದ ಎಂದು. ಆದರೆ, ನಾವೆಲ್ಲ ಒಂದು ವಿಚಾರವನ್ನು ಅರಿಯಬೇಕು. ಈ ದೇಶದಲ್ಲಿ ತುರ್ತು ಪರಿಸ್ಥಿಯನ್ನು ಹೇರಿದ್ದು ಕಾಂಗ್ರೆಸ್​. ಆದರೂ, ಮೋದಿ ಈ ದೇಶವನ್ನು ಹಾಳುಗೆಡವಿದರು ಎಂದು ಆರೋಪಿಸಲಾಗುತ್ತದೆ,” ಎನ್ನುವ ಮೂಲಕ ತಾವು ಕಾವಲುಗಾರ ಎಂಬುದನ್ನು ಮತ್ತೊಮ್ಮೆ ಪ್ರತಿಪಾದಿಸಿದರು.

About the author

ಕನ್ನಡ ಟುಡೆ

Leave a Comment