ರಾಜಕೀಯ

ಕಾಂಗ್ರೆಸ್‌ಗೆ ಮೈತ್ರಿ ಅಗತ್ಯವಿಲ್ಲ  ಎಂದು ಹೇಳಿದರು ಸಿದ್ದರಾಮಯ್ಯ

ಮೈಸೂರು: ರಾಷ್ಟ್ರಮಟ್ಟದಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಸೆಕ್ಯೂಲರ್‌ ಪಕ್ಷಗಳು ಒಂದಾಗಬೇಕು ಎಂಬ ಕೂಗಿಗೆ ತಮ್ಮ ಧ್ವನಿ ಸೇರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ  ಕಾಂಗ್ರೆಸ್ಸಿಗೆ ಯಾವುದೇ ಪಕ್ಷದ ಜತೆ ಕೈಜೋಡಿಸುವ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
‘‘ಕೋಮುವಾದಿಗಳನ್ನು ಸೋಲಿಸಲು ರಾಷ್ಟ್ರಮಟ್ಟದಲ್ಲಿ ಸೆಕ್ಯೂಲರ್‌ ಪಾರ್ಟಿಗಳು ಒಂದಾಗಬೇಕು ಎಂಬುದನ್ನು ನಾನೂ ಬೆಂಬಲಿಸುತ್ತೇನೆ. ಈ ವಿಚಾರವನ್ನು ಪ್ರತಿಪಾದಿಸುತ್ತೇನೆ. ನಮ್ಮ ಟಾರ್ಗೆಟ್‌ ಕೋಮುವಾದಿ ಪಕ್ಷವನ್ನು ಸೋಲಿಸುವುದೇ ಆಗಿದೆ.

ಕೋಮುವಾದಿಗಳು ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದ್ದಾರೆ. ಇಂಥವರಿಗೆ ಜನರು ವೋಟು ಕೊಡುವುದಿಲ್ಲ. ಕರ್ನಾಟಕವು ಸೆಕ್ಯೂಲರ್‌ ಪರ ಇರುವ ರಾಜ್ಯವಾಗಿದೆ. ಸೆಕ್ಯೂಲರ್‌ ವೋಟುಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕಿದೆ. ಆದರೆ ಇದು ರಾಷ್ಟ್ರಮಟ್ಟದಲ್ಲಿ ಆಗಬೇಕಿದೆ ಎಂದರು.

‘‘ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಮಂಗಳವಾರ ದಿಲ್ಲಿಗೆ ತೆರಳಿ ಪಕ್ಷದ ವರಿಷ್ಠರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯಸಭಾ ಚುನಾವಣೆ ವಿಚಾರದಲ್ಲಿ ಜೆಡಿಎಸ್‌ ಜತೆ ಚರ್ಚಿಸಿಲ್ಲ. ಈ ವಿಚಾರದಲ್ಲಿ ಜೆಡಿಎಸ್‌ ಜತೆ ಮಾತನಾಡುವುದೂ ಇಲ್ಲ.

“ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌ ಚುನಾವಣೆ ಫಲಿತಾಂಶ ರಾಜ್ಯ ವಿಧಾನಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮೇಘಾಲಯದಲ್ಲಿ ಕಾಂಗ್ರೆಸ್‌ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ತ್ರಿಪುರಾದಲ್ಲಿ ಸತತ 25 ವರ್ಷಗಳಿಂದ ಕಮ್ಯುನಿಸ್ಟರ್‌ ಆಡಳಿತ ಇತ್ತು. ಅಲ್ಲಿ ಬಿಜೆಪಿ ಸ್ಥಳೀಯ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಗೆಲುವು ಸಾಧಿಸಿದೆ. ಕಮುನಿಸ್ಟರಿಗೆ ಅಲ್ಲಿ ಹಿನ್ನೆಡೆಯಾಗಿದೆ.

ಕರ್ನಾಟಕಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕೈದು ಬಾರಿ ಬಂದು ಚುನಾವಣಾ ಪ್ರಚಾರ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಗಾಳಿ ಬೀಸಿಲ್ಲ,’’ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment