ರಾಜಕೀಯ

ಕಾಂಗ್ರೆಸ್‌-ತೆನೆ: ಗೌಡರ ನಿವಾಸಕ್ಕೆ ರಾಹುಲ್‌ ಗಾಂಧಿ ಭೇಟಿ

ಬೆಂಗಳೂರು: ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಮಾತುಕತೆ ಒಂದು ಹಂತಕ್ಕೆ ಬಂದಿದ್ದು, 10 ಕ್ಷೇತ್ರಗಳಿಗೆ ಮಾಜಿ ಪ್ರಧಾನಿ ದೇವೇಗೌಡರು ಬೇಡಿಕೆ ಇಟ್ಟಿದ್ದಾರೆ. ನವದೆಹಲಿಯಲ್ಲಿನ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇ ಗೌಡರ ನಿವಾಸದಲ್ಲಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಮಾತುಕತೆಯ ಸ್ಪಷ್ಟ ಫ‌ಲಿತಾಂಶ ಬಹಿರಂಗವಾಗದೇ ಇದ್ದರೂ, 12ರ ಬದಲಿಗೆ ಕಡೇ ಪಕ್ಷ 10 ಕ್ಷೇತ್ರಗಳನ್ನಾದರೂ ಬಿಟ್ಟುಕೊಡಿ ಎಂದು ಗೌಡರು, ರಾಹುಲ್‌ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಹಾಸನ, ಮಂಡ್ಯ, ಶಿವಮೊಗ್ಗ, ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಉತ್ತರ ಕನ್ನಡ, ವಿಜಯಪುರ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಗೆಲ್ಲುವ ಅವಕಾಶ ಹೆಚ್ಚಾಗಿದೆ. ಬಿಜೆಪಿ ಸೋಲಿಸಲು ನಮಗೆ ಅವಕಾಶ ಕೊಡಿ ಎಂದು ದೇವೇಗೌಡರು ಪ್ರಸ್ತಾಪ ಮಾಡಿದ್ದು, ರಾಹುಲ್‌ ಅವರು ತಕ್ಷಣಕ್ಕೆ ಯಾವುದೇ ಭರವಸೆ ನೀಡಿಲ್ಲ. ಬದಲಿಗೆ ಮತ್ತೂಮ್ಮೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನಿಮ್ಮೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.

ಗೌಡರ ನಿವಾಸದಲ್ಲಿ ಉಪಾಹಾರ ಸೇವಿಸಿದ ರಾಹುಲ್‌, ರಾಜ್ಯ ಉಸ್ತುವಾರಿ ವೇಣುಗೋಪಾಲ್‌, ಜೆಡಿಎಸ್‌ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ ಜತೆ ಸೀಟು ಹಂಚಿಕೆ ಕುರಿತು ರಾಜ್ಯ ನಾಯಕರ ಸಭೆ ಹಾಗೂ ಸಮನ್ವಯ ಸಮಿತಿಯಲ್ಲಿ ನಡೆದ ಸಭೆ, ಕೆಪಿಸಿಸಿ ಕ್ಷೇತ್ರಾವಾರು ಸಂಗ್ರಹಿಸಿರುವ ಮಾಹಿತಿ ಬಗ್ಗೆ ಚರ್ಚೆ ನಡೆಸಿದರು. ದೇವೇಗೌಡರು ಹಿಂದಿನ ಲೋಕಸಭೆ ಚುನಾವಣೆಗೂ ಈಗಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಮತಗಳಿಕೆ ಹಾಗೂ ಗೆಲ್ಲುವ ಅವಕಾಶ ಹೆಚ್ಚಾಗಿರುವವರಿಗೆ ಮಾನ್ಯತೆ ನೀಡಿದರೆ ಬಿಜೆಪಿ ಸೋಲಿಸುವ ನಮ್ಮಿಬ್ಬರ ಗುರಿ ಈಡೇರಲಿದೆ ಎಂದು ಹೇಳಿದರು.

ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲೂ ಈಗ ಜೆಡಿಎಸ್‌ ಗೆಲ್ಲುವ ಅವಕಾಶವಿದೆ.ಉದಾಹರಣೆಗೆ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಿಜೆಪಿ ಗೆಲುವು ಸಾಧಿಸಿರುವ ಮೈಸೂರು, ಬೆಂಗಳೂರು ಉತ್ತರ, ವಿಜಯಪುರ, ಶಿವಮೊಗ್ಗ,ಉತ್ತರ ಕನ್ನಡ ಕ್ಷೇತ್ರಗಳಲ್ಲೂ ಜೆಡಿಎಸ್‌ ಗೆಲುವು ಸಾಧಿಸಲು ಸಾಧ್ಯವಿದೆ. ಚಿಕ್ಕ ಬಳ್ಳಾಪುರದಲ್ಲಿ ಒಕ್ಕಲಿಗರೇ ಅಭ್ಯರ್ಥಿ ಯಾಗಬೇಕು ಎಂದರು.

12 ಕ್ಷೇತ್ರದ ಬದಲಿಗೆ 10 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾದಾಗ ಮೂರನೇ ಒಂದು ಭಾಗ ಸಚಿವ ಸ್ಥಾನಗಳು ಜೆಡಿಎಸ್‌ಗೆ ದೊರೆತಿವೆ. ಅದೇ ರೀತಿ ಲೋಕಸಭೆ ಕ್ಷೇತ್ರಗಳು ಹಂಚಿಕೆಯಾಗಲಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌ಗಾಂಧಿ, ಕಾಂಗ್ರೆಸ್‌ ಗೆಲುವು ಸಾಧಿಸಿರುವ ಎರಡು ಮೂರು ಕ್ಷೇತ್ರ ಬಿಟ್ಟುಕೊಡುವುದುಕಷ್ಟವಾಗಬಹುದು. ಜತೆಗೆ ಬಿಜೆಪಿ ಗೆಲುವು ಸಾಧಿಸಿರುವ ಮೈಸೂರು, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೂ ಗೆಲ್ಲುವ ಸಾಧ್ಯತೆಯಿದೆ. ಹೀಗಾಗಿ, ರಾಜ್ಯ ನಾಯಕರ ಅಭಿಪ್ರಾಯಕ್ಕೂ ನಾವು ಮನ್ನಣೆ ಕೊಡಬೇಕಾಗುತ್ತದೆ. ಮತ್ತೂಮ್ಮೆ ರಾಜ್ಯ ನಾಯಕರ ಜತೆ ಚರ್ಚಿಸಿ ಅಂತಿಮಗೊಳಿಸೋಣ ಎಂದು ಹೇಳಿದರು ಎಂದು ತಿಳಿದು ಬಂದಿದೆ.

ಉತ್ತರಕ್ಕೂ ಕೊಕ್ಕೆ: ಎಚ್‌.ಡಿ.ದೇವೇಗೌಡರು ಸ್ಪರ್ಧೆ ಮಾಡಿದರೆ ಬೆಂಗಳೂರು ಉತ್ತರ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಕಾಂಗ್ರೆಸ್‌ನ ರಾಜ್ಯನಾಯಕರು ಹೇಳಿದ್ದರಾದರೂ ಇದೀಗ ಆ ಕ್ಷೇತ್ರವೂ ನಮಗೇ ಇರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಮೈಸೂರು, ಬೆಂಗಳೂರು ಉತ್ತರ ಬಿಟ್ಟುಕೊಡಲು ಆಗದು. ಬೇಕಾದರೆ ಉಡುಪಿ-ಚಿಕ್ಕಮಗಳೂರು, ಬೀದರ್‌ ಅಥವಾ ಉತ್ತರ ಕನ್ನಡ ಬಿಟ್ಟುಕೊಡಬಹುದು ಎಂದು ಹೇಳಿದ್ದಾರೆ . ಹೀಗಾಗಿ, ಸಿದ್ದರಾಮಯ್ಯ ಅವರ ಪಟ್ಟಿನಿಂದ ಸೀಟು ಹಂಚಿಕೆ ಇತ್ಯರ್ಥಗೊಂಡಿಲ್ಲ ಎಂದು ಹೇಳಲಾಗಿದೆ.

6 ಅಥವಾ 8?: ಮೊದಲಿಗೆ ಹನ್ನೆರಡು ಕ್ಷೇತ್ರಕ್ಕೆ ಬೇಡಿಕೆ ಇಟ್ಟು ಇದೀಗ ಹತ್ತು ಕ್ಷೇತ್ರಕ್ಕೆ ದೇವೇಗೌಡರು ಪಟ್ಟು ಹಿಡಿದಿದ್ದರಾದರೂ ಸಿದ್ದರಾಮಯ್ಯನವರು 6 ಕ್ಷೇತ್ರ ಮಾತ್ರ ಬಿಟ್ಟುಕೊಡಿ ಎಂದು ರಾಹುಲ್‌ ಗಾಂಧಿಗೆ ತಿಳಿಸಿದ್ದಾರೆ. ಅಂತಿಮವಾಗಿ ಜೆಡಿಎಸ್‌ಗೆ 8 ಕ್ಷೇತ್ರ ಸಿಗಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಮೈತ್ರಿ ಅಂತಿಮವಾದಲ್ಲಿ, ಜೆಡಿಎಸ್‌ಗೆ ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಶಿವಮೊಗ್ಗ, ಬಿಜಾಪುರ, ಉಡುಪಿ-ಚಿಕ್ಕಮಗಳೂರು, ಧಾರವಾಡ ಅಥವಾ ಬೀದರ್‌ ಸಿಗಬಹುದು ಎನ್ನಲಾಗಿದೆ.

ರಾಜ್ಯ ನಾಯಕರ ಜತೆ ರಾಹುಲ್‌ ಸಭೆ: ದೇವೇಗೌಡರ ಜತೆ ರಾಹುಲ್‌ಗಾಂಧಿ ನಡೆಸಿದ ಮಾತುಕತೆಯ ಮಾಹಿತಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ರಾಜ್ಯ ನಾಯಕರಿಗೆ ನೀಡಲಿದ್ದು, ರಾಹುಲ್‌ ಗಾಂಧಿಯವರು ಮತ್ತೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಡಾ.ಜಿ.ಪರಮೇಶ್ವರ್‌, ಈಶ್ವರ್‌ ಖಂಡ್ರೆ ಜತೆ ಚರ್ಚಿಸಿದ ನಂತರವಷ್ಟೇ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ.

ನಾನು, ರಾಹುಲ್‌ಗಾಂಧಿ ಚರ್ಚೆ ಮಾಡಿದ್ದೇವೆ. ಕನಿಷ್ಠ 10 ಸೀಟು ಬಿಟ್ಟುಕೊಡು ವಂತೆ ಕೇಳಿದ್ದೇನೆ. ಗೆಲ್ಲುವ ದೃಷ್ಟಿಯಿಂದ ಚರ್ಚೆ ಮಾಡಿ ದ್ದೇವೆ. ಇದು ಮೊದಲ ಸಭೆ, ಮತ್ತೂಮ್ಮೆ ಕೆ.ಸಿ.ವೇಣುಗೋಪಾಲ್‌, ಡ್ಯಾನಿಶ್‌ ಅಲಿ ಚರ್ಚೆ ಮಾಡ್ತಾರೆ. – ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ. 

 

About the author

ಕನ್ನಡ ಟುಡೆ

Leave a Comment