ರಾಜಕೀಯ

ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ; ಇಂದು ಹೆಚ್.ಡಿ.ದೇವೇಗೌಡ, ರಾಹುಲ್ ಗಾಂಧಿಯಿಂದ ಫೈನಲ್

ಬೆಂಗಳೂರು: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಬುಧವಾರ ದೆಹಲಿಯಲ್ಲಿ ಅಂತಿಮ ಮಾತುಕತೆ ನಡೆಸಲಿದ್ದಾರೆ. ಆರಂಭದ ಎರಡು ಸುತ್ತಿನ ಮಾತುಕತೆ ಈಗಾಗಲೇ ಮುಗಿದಿದ್ದು ಜೆಡಿಎಸ್ 28 ಲೋಕಸಭೆ ಕ್ಷೇತ್ರಗಳಲ್ಲಿ 12 ಸ್ಥಾನಗಳು ತನಗೆ ಬೇಕು ಎಂದು ಒತ್ತಾಯಿಸುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಮುಖ್ಯವಾಗಿ ಸೇರಿದಂತೆ ಕೆಲವು ಸ್ಥಾನಗಳಿಗೆ ದೇವೇಗೌಡರು ಪಟ್ಟುಹಿಡಿಯುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಕಾಂಗ್ರೆಸ್ ಸಂಸದರಿರುವ 4 ಕ್ಷೇತ್ರಗಳಿಗೆ ಜೆಡಿಎಸ್ ಪಟ್ಟು ಹಿಡಿದಿರುವುದು ಕಾಂಗ್ರೆಸ್ ಗೆ ಆ ಸ್ಥಾನಗಳನ್ನು ಬಿಟ್ಟುಕೊಡುವುದು ಕಷ್ಟವಾಗಬಹುದು. ಹಾಸನ, ಮಂಡ್ಯ ಲೋಕಸಭಾ ಕ್ಷೇತ್ರಗಳು ಮಾತ್ರವಲ್ಲದೆ, ಜೆಡಿಎಸ್ ಬೆಂಗಳೂರು ಉತ್ತರ, ಶಿವಮೊಗ್ಗ, ಮೈಸೂರು, ವಿಜಯಪುರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ, ರಾಯಚೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಗೆ ಟಿಕೆಟ್ ಬೇಕು ಎಂದು ದೇವೇಗೌಡರು ಪಟ್ಟು ಹಿಡಿಯುವ ಸಾಧ್ಯತೆಯಿದೆ. ತಮ್ಮ ಪಕ್ಷದ ಸಂಸದರಿರುವ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡುವುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸುಲಭವಲ್ಲ. 2014ರಲ್ಲಿ ಮೋದಿ ಅಲೆ ಜೋರಾಗಿದ್ದರೂ ಕೂಡ ಕಾಂಗ್ರೆಸ್ ಕರ್ನಾಟಕದಲ್ಲಿ ಉತ್ತಮ ಸ್ಥಾನಗಳನ್ನು ಗಳಿಸಿಕೊಂಡಿತ್ತು. ಮೈತ್ರಿಯಿಂದ ತಮ್ಮ ಸ್ಥಾನಕ್ಕೆ ಯಾವುದೇ ಕುತ್ತು ಬರುವುದಿಲ್ಲ ಎಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಈಗಾಗಲೇ ಇರುವ ಕಾಂಗ್ರೆಸ್ ಸಂಸದರಿಗೆ ಭರವಸೆ ನೀಡಿದ್ದಾರೆ ಎನ್ನುತ್ತವೆ ಒಂದು ಮೂಲ. ಆದರೆ ಮೈಸೂರು, ಶಿವಮೊಗ್ಗ, ಮಂಡ್ಯ, ಹಾಸನ, ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಕಾಂಗ್ರೆಸ್ ಈಗಾಗಲೇ ಒಪ್ಪಿಕೊಂಡಿದೆ ಎನ್ನುತ್ತದೆ ಇನ್ನೊಂದು ಮೂಲ. ದೇವೇಗೌಡರು ಬೆಂಗಳೂರು ಉತ್ತರ ಅಥವಾ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಡುತ್ತಾರೆ ಎನ್ನಲಾಗುತ್ತಿದೆ.

ಆದರೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಥವಾ ಯಾವ ಕ್ಷೇತ್ರದಿಂದ ಎಂದು ನಿರ್ಧರಿಸಿಲ್ಲ. ಹಾಸನ ಕ್ಷೇತ್ರವನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ದೇವೇಗೌಡರು ಮನಸ್ಸು ತೋರುತ್ತಿಲ್ಲ ಎನ್ನುತ್ತಿವೆ ಇನ್ನೊಂದು ಮೂಲಗಳು. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸೀಟು ಹಂಚಿಕೆಯ ಪ್ರಸ್ತಾಪವನ್ನು ರಾಹುಲ್ ಗಾಂಧಿ ಮುಂದಿಡಲಿದ್ದಾರೆ.ನಿಖಿಲ್ ಸ್ಪರ್ಧೆಗೆ ಜೆಡಿಎಸ್ ನಲ್ಲಿಯೇ ಭಿನ್ನಮತ: ಮಂಡ್ಯ ಜಿಲ್ಲೆಯ ಯುವ ಕಾರ್ಯಕರ್ತರನ್ನು ಬೆಳೆಯಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಬಿಡುತ್ತಿಲ್ಲ ಎಂದು ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕ್ರಾಂತಿ ಸಿಂಹ ಹೇಳುತ್ತಾರೆ. ತಾವು ಎಷ್ಟು ಸಮಯ ಪಕ್ಷದ ಕಾರ್ಯಕರ್ತರಾಗಿಯೇ ಇರಬೇಕು. ಜೆಡಿಎಸ್ ಕುಟುಂಬ ರಾಜಕೀಯದಲ್ಲಿ ತೊಡಗಿದೆ ಎಂದು ಜನರಿಗೆ ಪ್ರಚಾರ ಮಾಡುತ್ತೇನೆ ಎಂದು ಅವರು ಹೇಳುತ್ತಾರೆ.

About the author

ಕನ್ನಡ ಟುಡೆ

Leave a Comment