ರಾಷ್ಟ್ರ ಸುದ್ದಿ

ಕಾಂಗ್ರೆಸ್ ಪ್ರಣಾಳಿಕೆ: ಉದ್ಯೋಗ ಸೃಷ್ಟಿಗೆ ಆದ್ಯತೆ, ಸಾಲ ಮರುಪಾವತಿಸದ ರೈತರ ಮೇಲೆ ಕ್ರಿಮಿನಲ್ ಮೊಕದ್ದಮೆ ಇಲ್ಲ

ನವದೆಹಲಿ:2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪಕ್ಷದ ಭರವಸೆ, ಆಶೋತ್ತರಗಳನ್ನು ಹೊತ್ತ ಪ್ರಣಾಳಿಕೆಯನ್ನು ಕಾಂಗ್ರೆಸ್ ದೆಹಲಿಯಲ್ಲಿ ಮಂಗಳವಾರ ಬಿಡುಗಡೆ ಮಾಡಿದೆ. ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಣಾಳಿಕೆ ಕಾಂಗ್ರೆಸ್ ಗೆ ಮುಂದಿನ ಹೆಜ್ಜೆಯಿಡಲು ನಾಂದಿಯಾಗಲಿದೆ. ವರ್ಷದ ಹಿಂದೆ ಪ್ರಣಾಳಿಕೆ ಸಿದ್ದಪಡಿಸಲು ಆರಂಭಿಸಿದಾಗ ದೇಶದ ಜನತೆಯ ಆಶೋತ್ತರಗಳನ್ನು ಈಡೇರಿಸಬೇಕೆಂದು ನಾನು ಹೇಳಿದ್ದೆ. ಇದರಲ್ಲಿ ನಾವು ಕೊಡುವ ಭರವಸೆಗಳು ಸತ್ಯವಾಗಿರುತ್ತದೆ ಎಂದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲ ಮರುಪಾವತಿ ಮಾಡದ ರೈತರ ವಿರುದ್ಧ ಕೇಸು ದಾಖಲಿಸುವುದಿಲ್ಲ, ಕ್ರಿಮಿನಲ್ ಅಪರಾಧವಾಗುವುದಿಲ್ಲ. ರೈತರಿಗೆ ಪ್ರತ್ಯೇಕ ಕಿಸಾನ್ ಬಜೆಟ್ ಮಂಡಿಸಲಾಗುವುದು ಎಂದು ಹೇಳಿದರು. ಇದುವರೆಗೆ ರೈಲ್ವೆಗೆ ಹೇಗೆ ಪ್ರತ್ಯೇಕ ಬಜೆಟ್​ ಇರುತ್ತದೋ ಅದೇ ರೀತಿ ರೈತರಿಗೆ ಪ್ರತ್ಯೇಕ ಬಜೆಟ್​ ಮಂಡನೆ ಮಾಡಲಿದ್ದೇವೆ.ಇದು ನಮ್ಮ ಪಕ್ಷದ ಐತಿಹಾಸಿಕ ನಿರ್ಧಾರ, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್​ಗಢ, ಪಂಜಾಬ್​ನಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿ ಸಾಲಮನ್ನಾ ಮಾಡಲಾಗಿದೆ ನೀರವ್​ ಮೋದಿ, ಅನಿಲ್ ಅಂಬಾನಿ, ವಿಜಯ್​ ಮಲ್ಯನಂತವರು ಕೋಟ್ಯಂತರ ರೂ. ಸಾಲ ಮಾಡಿ ಶಿಕ್ಷೆಯಿಂದ ಬಚಾವಾಗುತ್ತಾರೆ.ಆದರೆ, ನಮ್ಮ ಬಡ ರೈತರು ಬ್ಯಾಂಕಿಂದ ಪಡೆದ ಸಾಲ ಕಟ್ಟಿಲ್ಲವೆಂದರೆ ಅವರನ್ನು ಅಪರಾಧಿಗಳೆಂದು ಘೋಷಿಸಲಾಗುತ್ತದೆ, ಜೈಲಿಗೆ ಹಾಕಲಾಗುತ್ತದೆ, ಇದರಿಂದ ತಪ್ಪಿಸಿ ದೇಶದ ಬಡ, ಮುಗ್ಧ ರೈತರನ್ನು ಕಾಪಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ರಿಮಿನಲ್ ಮೊಕದ್ದಮೆಯನ್ನು ತೆಗೆದುಹಾಕಲಾಗುವುದು ಎಂದು ಘೋಷಿಸಿದರು.
ಶಿಕ್ಷಣಕ್ಕೆ ಬಜೆಟ್ ನಲ್ಲಿ ಶೇಕಡಾ 6 ಮೀಸಲಿಡುತ್ತೇವೆ. ಸರ್ಕಾರಿ ಆಸ್ಪತ್ರೆಗಳನ್ನು ಬಲವರ್ಧಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ನ್ಯಾಯದ ವಿಚಾರದಲ್ಲಿ ಹಲವು ವಿಷಯಗಳ ಕುರಿತು ಮಾತನಾಡುತ್ತಾರೆ. ತಾನು ಜನರ ಚೌಕಿದಾರ ಎಂದು ಸಂಬೋಧಿಸಿಕೊಳ್ಳುತ್ತಾರೆ. ಆದರೆ ಈ ಚೌಕಿದಾರ ಕಳ್ಳ. ಚೌಕಿದಾರ ಓಡಿಹೋಗಬಹುದು, ಆದರೆ ತಪ್ಪಿಸಿಕೊಂಡು ಅಡಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಗೆ ಹಿಂದೂ ಮತಗಳು ಸಿಗದೆ ಓಡಿಹೋಗುತ್ತದೆ ಎಂದು ಪ್ರಧಾನಿಯವರ ಹೇಳಿಕೆಗೆ ಈ ರೀತಿ ಉತ್ತರಿಸಿದ್ದಾರೆ. ಬಿಜೆಪಿ ದೇಶವನ್ನು ವಿಭಜಿಸಲು ನೋಡುತ್ತಿದೆ. ಅದು ಜಮ್ಮು-ಕಾಶ್ಮೀರದ ಪರಿಸ್ಥಿತಿಯಲ್ಲಿ ಗೊತ್ತಾಗುತ್ತದೆ. ಉಗ್ರವಾದಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ದೇಶದ ಭದ್ರತೆಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತದೆ ಎಂದು ಹೇಳಿದರು.
ದಕ್ಷಿಣ ಭಾರತದವರು ಈಗಿನ ಮೋದಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಅನೇಕ ದಕ್ಷಿಣ ಭಾರತೀಯರು ನನ್ನ ಜೊತೆ ಹೇಳಿಕೊಂಡಿದ್ದಾರೆ ಉತ್ತರ ಭಾರತದಲ್ಲಿ ಮಾತ್ರ ಬಿಜೆಪಿಗೆ ಕಾಣಿಸುತ್ತದೆ ದಕ್ಷಿಣ ಭಾರತದವರು ಭಾರತೀಯರೇ ಅಲ್ಲ ಎಂಬಂತೆ ಈಗಿನ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು. ದಕ್ಷಿಣ ಭಾರತದಲ್ಲಿ ನಾನು ಸ್ಪರ್ಧಿಸಬೇಕೆಂಬ ಬೇಡಿಕೆ ಇತ್ತು, ಪ್ರಧಾನಿ ಮೋದಿ ದಕ್ಷಿಣ ಭಾರತವನ್ನು ಕಡೆಗಣಿಸಿದ್ದಾರೆ ನಾನು ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಲು ಅಲ್ಲಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದಪ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿರುವುದನ್ನು ಸಮರ್ಥಿಸಿಕೊಂಡರು.
ಲಕ್ಷಾಂತರ ಜನರ ಸಲಹೆ, ಅಭಿಪ್ರಾಯಗಳನ್ನು ಪಡೆದು ಕಾಂಗ್ರೆಸ್ ಪ್ರಣಾಳಿಕೆಯನ್ನು ರಚಿಸಿದೆ. ಇದು ದೇಶದ ರೈತರು, ಯುವಜನತೆ, ಮಹಿಳೆಯರು, ಕೈಗಾರಿಕೆ, ಅಲ್ಪಸಂಖ್ಯಾತರು, ಆರೋಗ್ಯವಲಯ, ವಿದೇಶಿ ನೀತಿ, ರಾಷ್ಟ್ರೀಯ ಭದ್ರತೆ ಮೊದಲಾದ ವಿಷಯಗಳನ್ನು ಒಳಗೊಂಡ ಕಟ್ಟಕಡೆಯ ಪ್ರಜೆಗಳಿಗೆ ತಲುಪುವ ಮತ್ತು ಪ್ರಯೋಜನವಾಗುವ ಪ್ರಣಾಳಿಕೆಯಾಗಿದೆ ಎಂದು ಹೇಳಿದರು. ದೇಶಾದ್ಯಂತ ಸತತ ಸಲಹೆಗಳನ್ನು ಪಡೆದು ಪ್ರಣಾಳಿಕೆಯನ್ನು ಸಿದ್ದಪಡಿಸಲಾಯಿತು. ದೇಶ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಬಗೆಹರಿಸುವ ಗುರಿಯನ್ನಿಟ್ಟುಕೊಂಡು ಪ್ರಭಾವಶಾಲಿ ಪ್ರಣಾಳಿಕೆಯನ್ನು ಕಾಂಗ್ರೆಸ್ ಸಿದ್ದಪಡಿಸಿದೆ. ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ವಲಯಕ್ಕೆ ಆದ್ಯತೆ, ಆರ್ಥಿಕ ಬೆಳವಣಿಗೆಯನ್ನು ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ ಎಂದರು.
ಆರೋಗ್ಯ ಮತ್ತು ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಧ್ಯೇಯೋದ್ದೇಶ.ವಿಶ್ವವಿದ್ಯಾಲಯಗಳು, ಐಐಟಿ, ಐಐಎಂನಂತಹ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಎಲ್ಲ ವರ್ಗದವರ ಗೆಟುಕುವಂತಾಗಬೇಕು. ಆ ನಿಟ್ಟಿನಲ್ಲಿ ಬಜೆಟ್​ನಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಿದ್ದೇವೆ. ಬಡತನ ತೊಲಗಿಸಲು ದೇಶದ ಶೇಕಡಾ 20ರಷ್ಟು ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವುದು, ಖಾಲಿ ಇರುವ 22 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದು, ಪಂಚಾಯತಿಗಳಲ್ಲಿ 10 ಲಕ್ಷ ಉದ್ಯೋಗಗಳ ಭರ್ತಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕನಿಷ್ಠ ಕೆಲಸ ದಿನಗಳನ್ನು 100ರಿಂದ 150 ದಿನಗಳಿಗೆ ಹೆಚ್ಚಿಸುವುದು, ಜಿಡಿಪಿಯಲ್ಲಿ ಶೇ. 6ರಷ್ಟು ಹಣ ಶಿಕ್ಷಣಕ್ಕೆ ಮೀಸಲು, ಖಾಸಗಿ ಇನ್ಷೂರೆನ್ಸ್​ ಕಂಪನಿಗಳಿಗೆ ತಿಲಾಂಜಲಿ, ಜಿಎಸ್​ಟಿಯನ್ನು ಸರಳಗೊಳಿಸುವುದು; ಜಿಎಸ್​ಟಿಯಲ್ಲಿ ಎರಡು ಹಂತದ ಜಿಎಸ್​ಟಿ ತೆರಿಗೆ ಮಾತ್ರ ಇರಲಿದೆ ಎಂದು ರಾಹುಲ್ ಗಾಂಧಿ ಘೋಷಿಸಿದರು. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧಿಕಾರಕ್ಕೆ ಬಂದ ಮೊದಲ ದಿನವೇ ರಫೇಲ್ ಹಗರಣದ ತನಿಖೆ ಪ್ರಾರಂಭ, ಮಾನಹಾನಿ ಪ್ರಕರಣವನ್ನು ಅಪರಾಧ ಕೃತ್ಯ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 499 ಅನ್ನು ಕೈಬಿಡುವುದು; ಈ ಪ್ರಕರಣವನ್ನು ಸಿವಿಲ್ ಅಫೆನ್ಸ್ ಎಂದು ಪರಿಗಣಿಸುವುದು, ರಾಷ್ಟ್ರದ್ರೋಹ ವಿಚಾರದಲ್ಲಿರುವ ಐಪಿಸಿ ಸೆಕ್ಷನ್ 124ಎ ಅನ್ನು ಕೈಬಿಡುವುದು; ಈ ಸೆಕ್ಷನ್ ಸಾಕಷ್ಟು ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

About the author

ಕನ್ನಡ ಟುಡೆ

Leave a Comment