ರಾಜಕೀಯ

ಕಾಂಗ್ರೆಸ್ ಶಾಸಕರು ರೆಸಾರ್ಟ್ ಗೆ ಶಿಫ್ಟ್, ಶಾಸಕಾಂಗ ಸಭೆಗೆ ಗೈರಾದ ಶಾಸಕರಿಗೆ ನೋಟಿಸ್

ಬೆಂಗಳೂರು: ಆಪರೇಷನ್‌ ಕಮಲ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶುಕ್ರವಾರ ವಿಶೇಷ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಸಭೆಗೆ ಗೈರು ಆದ ನಾಲ್ವರು ಶಾಸಕರಿಗೆ ನೋಟಿಸ್ ನೀಡುವುದಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆಯ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಶಾಸಕಾಂಗ ಸಭೆಗೆ 76 ಶಾಸಕರು ಹಾಜರಾಗಿದ್ದು, ನಾಲ್ವರು ಗೈರು ಆಗಿದ್ದಾರೆ. ಗೈರು ಆದ ಶಾಸಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.
ಇಬ್ಬರು ಶಾಸಕರು ಗೈರು ಆಗಿದ್ದಕ್ಕೆ ಕಾರಣ ನೀಡಿದ್ದಾರೆ. ಆದರೆ ಇನ್ನು ಇಬ್ಬರು ಶಾಸಕರು ಯಾವುದೇ ಮಾಹಿತಿ ನೀಡಿಲ್ಲ. ಉಮೇಶ್ ಜಾಧವ್ ಅವರು ಅನಾರೋಗ್ಯದಿಂದ ಸಭೆಗೆ ಬಂದಿಲ್ಲ. ನಾಗೇಂದ್ರ ಅವರು ಕೋರ್ಟ್ ವಿಚಾರಣೆಯ ಕಾರಣ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟ್ಟಳ್ಳಿ ಯಾವುದೇ ಮಾಹಿತಿ ನೀಡಿಲ್ಲ. ಈ ನಾಲ್ವರು ಶಾಸಕರಿಗೆ ವಿವರಣೆ ಕೇಳಿ ನೋಟಿಸ್ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನೂ ಆಪರೇಷನ್‌ ಕಮಲ ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಎಲ್ಲಾ ಕಾಂಗ್ರೆಸ್‌ ಶಾಸಕರು ರೆಸಾರ್ಟ್ ಗೆ ತೆರಳುತ್ತಿರುವುದಾಗಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕೇವಲ 3 ರಿಂದ 4 ಸ್ಥಾನ ಗೆಲ್ಲಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವರೇ ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

About the author

ಕನ್ನಡ ಟುಡೆ

Leave a Comment