ರಾಷ್ಟ್ರ ಸುದ್ದಿ

ಕಾರ್ತಿ ಚಿದಂಬರಂಗೆ ಸೇರಿದ 54 ಕೋಟಿ ರೂ. ಮೌಲ್ಯದ ಸಂಪತ್ತನ್ನು ವಶಕ್ಕೆ ಪಡೆದ ಇ.ಡಿ

ನವದೆಹಲಿ : ಐಎನ್​ಎಕ್ಸ್​ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ಸೇರಿದ 54 ಕೋಟಿ ರೂ. ಮೌಲ್ಯದ ಸಂಪತ್ತನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದುಕೊಂಡಿದೆ. ಭಾರತ, ಲಂಡನ್​ ಹಾಗೂ ಸ್ಪೇನ್​ನಲ್ಲಿ ಕಾರ್ತಿ ಚಿದಂಬರಂ ಹೊಂದಿರುವ ಈ ಸಂಪತ್ತನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಇಂಗ್ಲೆಂಡ್​ನಲ್ಲಿರುವ ಸೋಮೆರ್​ಸೆಟ್​ನ ಕಾಟೇಜ್​ ಮತ್ತು ಮನೆ, ಸ್ಪೇನ್​ನಲ್ಲಿರುವ ಟೆನ್ನಿಸ್​ ಕ್ಲಬ್​ ಕೂಡ ಸೇರಿದೆ. ಅಲ್ಲದೆ, ತಮಿಳುನಾಡಿನ ಕೊಡೈಕೆನಾಲ್, ಊಟಿ ಮತ್ತು ದೆಹಲಿಯ ಜೋರ್​ಬಗ್​ನಲ್ಲಿರುವ ಆಸ್ತಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಜಾರಿ ನಿರ್ದೇಶನಾಲಯದ ಮೂಲಗಳ ಪ್ರಕಾರ, ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಎಎಸ್​ಸಿಪಿಎಲ್​) ಹೆಸರಿನಲ್ಲಿ ಚೆನ್ನೈನ ಬ್ಯಾಂಕ್​ನಲ್ಲಿ ಇರಿಸಿದ್ದ 90 ಲಕ್ಷ ಸ್ಥಿರ ಠೇವಣಿ ವಿವರಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಈ ಆಸ್ತಿ ಕಾರ್ತಿ ಚಿದಂಬರಂ ಮತ್ತು ಎಎಸ್​ಸಿಪಿಎಲ್​ ಹೆಸರಿನಲ್ಲಿದೆ.

ಏನಿದು ಪ್ರಕರಣ: ಪಿ. ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಐಎನ್‌ಎಕ್ಸ್‌ ಮಾಧ್ಯಮ ಸಂಸ್ಥೆಗೆ ವಿದೇಶಿ ಹೂಡಿಕೆ ಪಡೆದುಕೊಳ್ಳಲು ಕಾನೂನುಬಾಹಿರವಾಗಿ ಅನುಮೋದನೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಚಿದಂಬರಂ ಈಗ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ನಿಗಾವಣೆಯಲ್ಲಿದ್ದಾರೆ. ಐಎನ್ಎಕ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ ತಿಂಗಳಲ್ಲಿ ಕಾರ್ತಿ ಚಿದಂಬರಂ ಅವರನ್ನು ಬಂಧಿಸಲಾಗಿತ್ತು. ನಂತರ ದೆಹಲಿ ಹೈಕೋರ್ಟ್​ ಮಾರ್ಚ್​ನಲ್ಲಿ ಜಾಮೀನು ಮಂಜೂರು ಮಾಡಿತ್ತು. ಕಾರ್ತಿ ಚಿದಂಬರಂ ಫೆಮಾ ನಿಯಮವನ್ನು ಉಲ್ಲಂಘಿಸಿ ಹಣ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment