ರಾಷ್ಟ್ರ

ಕಾವೇರಿ ನದಿ ನೀರು ಹಂಚಿಕೆಗಾಗಿ ಕೇಂದ್ರದ ಮೇಲ್ಮನವಿ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕುರಿತು ಯೋಜನೆ ರೂಪಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟ ನಿರ್ದೇಶನ ಕೋರುವಂತೆ ಕೇಂದ್ರದ ಕಾನೂನು ಸಚಿವಾಲಯವು ಜಲ ಸಂಪನ್ಮೂಲ ಸಚಿವಾಲಯಕ್ಕೆ ಸಲಹೆ ನೀಡಿದೆ. ಕಳೆದ ಫೆಬ್ರುವರಿ 16ರಂದು ಕಾವೇರಿ ಜಲವಿವಾದ ಕುರಿತು ಅಂತಿಮ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ಆರು ವಾರಗಳಲ್ಲಿ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಕಣಿವೆ ವ್ಯಾಪ್ತಿಯ ರಾಜ್ಯಗಳಿಗೆ ನೀರು ಹಂಚಿಕೆಗಾಗಿ ಯೋಜನೆ ರೂಪಿಸಬೇಕು ಎಂದು ಹೇಳಲಾಗಿದೆ.

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಆದೇಶದ ಜಾರಿಯ ಕುರಿತು ಬುಧವಾರ ನಡೆದ ಕೇಂದ್ರದ ಸಂಪುಟ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಆದರೆ ಕೋರ್ಟ್‌ನಿಂದ ಸ್ಪಷ್ಟ ನಿರ್ದೇಶನದ ಅಗತ್ಯವಿದೆ ಎಂದು ಕಾನೂನು ಸಚಿವಾಲಯ ತಿಳಿಸಿದ್ದರಿಂದ ವಿಷಯದ ಚರ್ಚೆಯನ್ನು ಮುಂದೂಡಲಾಯಿತು.

ಸುಪ್ರೀಂ ಕೋರ್ಟ್ ನೀಡಿರುವ ಗಡುವು ಇದೇ 29ರಂದು ಮುಕ್ತಾಯವಾಗಲಿದೆ. ಕೇಂದ್ರದ ಜಲಸಂಪನ್ಮೂಲ ಸಚಿವಾಲಯವು ಸ್ಪಷ್ಟನೆ ಕೋರಿ ಸುಪ್ರೀಂ ಕೋರ್ಟ್‌ಗೆ ಶನಿವಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಯೋಜನೆ ರೂಪಿಸುವಂತೆ ಸೂಚಿಸಿದ್ದರೂ ಈವರೆಗೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.

 

About the author

ಕನ್ನಡ ಟುಡೆ

Leave a Comment