ಕ್ರೈಂ

ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್: ಕೇರಳ ಮೂಲದ 7 ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ ಆರೋಪದಲ್ಲಿ ಏಳು ಜನ ಹಿರಿಯ ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲ ಹಾಗೂ ಬೊಮ್ಮನಹಳ್ಳಿ ನಿವಾಸಿಗಳಾದ ಅಜಯ್‌ ಟೋಮ್‌, ಅಮಲ್‌, ಅಮಲ್‌ ಬೆನ್ನಿ, ಮೊಹಮದ್‌ ಬಿನ್‌ ಫೈಜಲ್‌, ಎಂ. ನಾಜೀಫ್‌, ಮೊಹಮದ್‌ ನಜಿಕ್‌ ಮತ್ತು ಸಾಹೀರ್‌ ಬಂಧಿತರು. ಇವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೊಮ್ಮನಹಳ್ಳಿಯ ಆಕ್ಸಫರ್ಡ್‌ ಕಾಲೇಜಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಅದೇ ಕಾಲೇಜಿನಲ್ಲಿ 10 ದಿನಗಳ ಹಿಂದಷ್ಟೇ ಡಿ ಫಾರ್ಮ್‌ ವ್ಯಾಸಂಗ ಮಾಡಲು ಪ್ರವೇಶ ಪಡೆದಿದ್ದ ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳನ್ನು ಬಲವಂತವಾಗಿ ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ ಅವರಿಂದ ಡಾನ್ಸ್‌ ಮಾಡಿಸಿ, ಹಾಡು ಹೇಳಿಸಿ, ನೆಲ ಒರೆಸಿಕೊಂಡು ಕೆಟ್ಟ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ ತಡರಾತ್ರಿ 2.30ರಲ್ಲಿ ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ತಡರಾತ್ರಿ 3 ಗಂಟೆ ಸುಮಾರಿಗೆ ಇಬ್ಬರು ಕಿರಿಯ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಮರಳಿದ್ದರು. ಆದರೆ, ಈ ವಿಚಾರವನ್ನು ವಾರ್ಡನ್‌ ಗುರುಮೂರ್ತಿ ಅವರಿಗೆ ತಿಳಿಸಿರಲಿಲ್ಲ. ಆದರೆ, ಮರುದಿನ ಹಾಸ್ಟೆಲ್‌ಗೆ ವಿಳಂಬವಾಗಿ ಮರಳಿದ್ದು ಏಕೆ ಎಂದು ಒತ್ತಡ ಹಾಕಿ ಕೇಳಿದಾಗ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾರೆ. ಈ ವಿಚಾರವನ್ನು ಕಾಲೇಜು ಮುಖ್ಯಸ್ಥರ ಗಮನಕ್ಕೆ ತಂದ ವಾರ್ಡನ್‌, ಬಳಿಕ ಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಆ.18ರಂದು ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾಲೇಜಿಗೆ ತೆರಳಿ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ರ‍್ಯಾಗಿಂಗ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment