ಸಿನಿ ಸಮಾಚಾರ

ಕೀರ್ತಿಗೆ ಹಲ್ಲೆ ವೀಡಿಯೋ ನಾಗರತ್ನ ಮಕ್ಕಳ ಪೆನ್‌ಡ್ರೈವ್‌ನಲ್ಲೇ ಪತ್ತೆ

ಬೆಂಗಳೂರು: ನಟ ದುನಿಯಾ ವಿಜಿ ಜೈಲಿನಲ್ಲಿದ್ದಾಗ ಕೀರ್ತಿಗೌಡ ಮೇಲೆ ಮೊದಲ ಪತ್ನಿ ನಾಗರತ್ನ ಮತ್ತು ಮಕ್ಕಳು ಮಾಡಿದ ಹಲ್ಲೆ ಘಟನೆಯ ದೃಶ್ಯ ಪತ್ತೆಯಾಗಿದ್ದು, ವಿಚಿತ್ರವೆಂದರೆ ದೃಶ್ಯವು ಮಗಳಾದ ಮೋನಿಕಾ ಕೊಠಡಿಯಲ್ಲಿ ದೊರೆತ ಪೆನ್‌ಡ್ರೈವ್‌ನಿಂದಲೇ ಬಹಿರಂಗಗೊಂಡಿದೆ. ದೃಶ್ಯ ಸಿಕ್ಕದ ತಕ್ಷಣ ಕೀರ್ತಿಗೌಡ ನೀಡಿದ್ದ ದೂರಿನ ವಿಚಾರಣೆ ನಡೆಸಲು ಮುಂದಾದ ಗಿರಿನಗರ ಪೊಲೀಸರಿಗೆ ದುನಿಯಾ ವಿಜಿಯ ಮಕ್ಕಳು ಬಾಗಿಲು ತೆಗೆಯದೇ ವಾಪಸ್‌ ಕಳುಹಿಸಿದರು. ನಂತರ ವಕೀಲರ ಮೂಲಕ ಠಾಣೆಗೆ ಹಾಜರಾದರು. ಆ ವೇಳೆ ಠಾಣೆಗೆ ಧಾವಿಸಿ ಬಂದ ನಟ ವಿಜಿಯ ಕುಟುಂಬದ ಮನವಿ ಮೇಲೆ ಮಗಳು ಮೋನಿಕಾಳನ್ನು ಕೇಸ್‌ನಿಂದ ಕೈಬಿಡಲಾಯಿತು. ನಾಗರತ್ನ ಮೇಲಿನ ಪ್ರಕರಣ ಮುಂದುವರಿಸಲಾಗಿದೆ.

”ಮಕ್ಕಳಾದ ಮೋನಿಕಾ ಮತ್ತು ಮೋನಿಶಾ ಪಾಲಿಗೆ ಅವರ ತಂದೆ ಸತ್ತು ಹೋದಂತೆ. ಅದೇ ರೀತಿ ಅವರು ಕೂಡ ನನ್ನ ಪಾಲಿಗೆ ಸತ್ತಂತೆ. ಇದೇ ಕೊನೆಯ ಕ್ಷಮೆ. ಅವರಿಬ್ಬರು ನಾಗರತ್ನ ಜೊತೆ ಚೆನ್ನಾಗಿರಲಿ. ನನ್ನ ಮನೆಗೆ ಅವರು ಯಾವತ್ತೂ ಬರುವುದು ಬೇಡ” ಎಂದು ನಟ ದುನಿಯಾ ವಿಜಿ ಹೇಳಿದರು. ನಂತರ ಮನೆಗೆ ತೆರಳಿ ಸುದ್ದಿಗಾರರ ಜೊತೆ ಮಾತನಾಡಿದ ವಿಜಯ್‌, ”ಕೀರ್ತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೋನಿಕಾ ಮೇಲೂ ಆರೋಪ ಹೊರಿಸಲಾಗಿತ್ತು. ಆಕೆಯನ್ನು ಸೇರಿಸದಂತೆ ಮಾಡಿದ ಮನವಿಗೆ ಪೊಲೀಸರು ಒಪ್ಪಿದ್ದಾರೆ. ಮತ್ತೊಂದೆಡೆ ಸಹೋದರ, ಮಕ್ಕಳನ್ನು ಠಾಣೆಗೆ ಕಳುಹಿಸಿ ನಾಗರತ್ನ ಮಾತ್ರ ನಾಪತ್ತೆಯಾಗಿದ್ದಾರೆ. ಕೀರ್ತಿಗೌಡ ವಿರುದ್ಧ ಮಗಳು ದೂರು ನೀಡಿದ್ದಾಳೆ. ಆದರೂ, ಮಗಳ ಮೇಲೆ ನನಗೆ ಸಿಟ್ಟಿಲ್ಲ. ಆದರೆ, ಆಕೆಗೆ ಬುದ್ಧಿ ಇಲ್ಲಎಂದು ಹೇಳಬಲ್ಲೆ” ಎಂದು ವಿಜಯ್‌ ಹೇಳಿದರು.

ಮನೆ ಬಳಿ ಹೈಡ್ರಾಮಾ : ಸೆ.22ರಂದು ವಿಜಯ್‌ ಜೈಲಿನಲ್ಲಿದ್ದ ವೇಳೆ ನಡೆದ ಹಲ್ಲೆ ಸಂಬಂಧ ಕೀರ್ತಿಗೌಡ ದೂರಿನ ವಿಚಾರಣೆ ನಡೆಸಲು ಮಹಿಳಾ ಪೊಲೀಸರು ಕತ್ರಿಗುಪ್ಪೆಯಲ್ಲಿರುವ ನಾಗರತ್ನ ಮನೆಗೆ ಹೋದಾಗ ಕಿಟಕಿ ಮೂಲಕವೇ ಪೊಲೀಸರ ಜೊತೆ ಮಕ್ಕಳು ಮಾತನಾಡಿದರು. ”ನೀವು ಬಂದಿರುವ ಉದ್ದೇಶ ಏನು” ಎಂದು ಮಕ್ಕಳು ಪ್ರಶ್ನಿಸಿದರು. ಪೊಲೀಸರು, ”ವಿಚಾರಣೆಗೆ ಬಂದಿದ್ದೇವೆ” ಎಂದರೂ ಬಾಗಿಲು ತೆಗೆಯಲಿಲ್ಲ. ಅಂತಿಮವಾಗಿ ನಾಗರತ್ನ ಪರ ವಕೀಲೆ ಮೀನಾ ಅವರು ಮಕ್ಕಳೊಂದಿಗೆ ಠಾಣೆಗೆ ತೆರಳಿ ವಿಚಾರಣೆ ಎದುರಿಸಿದರು. ನಾಗರತ್ನ ಮಾತ್ರ ಬರಲಿಲ್ಲ.

ಪೊಲೀಸರಿಂದ ಕಾನೂನು ದುರುಪಯೋಗ: ವಕೀಲರ ಆರೋಪ ”ಭಾನುವಾರ ಬೆಳಗ್ಗೆ ಪೊಲೀಸರು ವಿಚಾರಣೆಗೆ ಬಂದಾಗ ನಾಗರತ್ನ ಔಟ್‌ ಆಫ್‌ ಸ್ಟೇಷನ್‌ನಲ್ಲಿದ್ದರು. ಮಕ್ಕಳು ಮಾತ್ರ ಮನೆಯಲ್ಲಿದ್ದು, ಹೆದರಿ ಬಾಗಿಲು ತೆಗೆದಿಲ್ಲ. ನಾಗರತ್ನ ವಿರುದ್ಧ ಐಪಿಸಿ ಕಲಂ 326 ಕೇಸ್‌ ದಾಖಲಿಸಿದ್ದಾರೆ. ಆದರೆ, ನಾಗರತ್ನ ಮಾರಕಾಯುಧವನ್ನು ಬಳಸಿಲ್ಲ. ಬರೀ ಚಪ್ಪಲಿ ಮತ್ತು ಕೈನಿಂದ ಹೊಡೆದಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿದೆ. ಅದಕ್ಕೂ ಮುಂಚೆ ನಡೆದ ಗಲಾಟೆಯ ವಿಡಿಯೊವನ್ನು ದೂರುದಾರರು ಬಹಿರಂಗಪಡಿಸಿಲ್ಲ” ಎಂದು ನಾಗರತ್ನ ಪರ ವಕೀಲರಾದ ಮೀನಾ ರಾಘವನ್‌ ಸುದ್ದಿಗಾರರಿಗೆ ತಿಳಿಸಿದರು. ‘ಕುಟುಂಬದಲ್ಲಿ ಒಂದು ಹೆಣ್ಣಿಗೆ ಅನ್ಯಾಯವಾದಾಗ, ಆಕೆಯಿಂದ ವಿಚ್ಛೇದನ ಪಡೆಯದೆ ಬೇರೆ ಹೆಣ್ಣಿನ ಜೊತೆ ತನ್ನ ಪತಿ ಇರುವುದನ್ನು ನೋಡಿ ಯಾರೂ ಸುಮ್ಮನಿರುವುದಿಲ್ಲ. ಕಲಂ 326 ಹಾಕಿರುವುದು ಒಂದು ಹೆಣ್ಣಿನ ಮೇಲಿನ ದೌರ್ಜನ್ಯವಲ್ಲದೇ ಬೇರೇನು ಅಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇನೆ” ಎಂದು ಮೀನಾ ಹೇಳಿದರು.

ಹಲ್ಲೆ ವೀಡಿಯೋ ಸಿಕ್ಕಿದ್ದು ಹೇಗೆ? ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ನಾಗರತ್ನ ಮತ್ತು ಕೀರ್ತಿಗೌಡ ನಡುವೆ ಗಲಾಟೆಯನ್ನು ಡಿವಿಆರ್‌ನಿಂದ ಪೆನ್‌ಡ್ರೈವ್‌ಗೆ ಮೋನಿಕಾ ವರ್ಗಾಯಿಸಿಕೊಂಡಿದ್ದರು. ಅದನ್ನು ತನ್ನ ಕೊಠಡಿಯಲ್ಲಿ ಬಚ್ಚಿಟ್ಟಿದ್ದರು. ತಾಯಿ ಮನೆಗೆ ಹೋಗಿದ ಮೋನಿಕಾ ಪೆನ್‌ಡ್ರೈವ್‌ ನೆನಪಾಗಿ ವಾಪಸ್‌ ಪಡೆಯಲು ಬಂದರೆ ಬಾಗಿಲು ತೆರೆದಿರಲಿಲ್ಲ. ಆಗ, ಕಾರಿನ ದಾಖಲೆ ತೆಗೆದುಕೊಂಡು ಹೋಗಲು ಬಂದಿದ್ದಾಗಿ ಕೀರ್ತಿಗೌಡಗೆ ತಿಳಿಸಿದರು. ಆದರೆ, ಕಾರು ವಿಜಯ್‌ ಹೆಸರಿನಲ್ಲಿದ್ದರಿಂದ ಅನುಮಾನ ಉಂಟಾಗಿದೆ. ಬೇರೆ ದಾಖಲೆ ಏನಾದರೂ ಇರಬಹುದು ಎಂಬ ಶಂಕೆ ಮೇಲೆ, ಆಕೆಯ ಕೊಠಡಿಯಲ್ಲಿ ಶೋಧ ಮಾಡಿದಾಗ ಪೆನ್‌ ಡ್ರೈವ್‌ ಸಿಕ್ಕಿದೆ. ಅದರಲ್ಲಿ ಹಲ್ಲೆ ದೃಶ್ಯವಿತ್ತು. ಸಿಸಿ ಕ್ಯಾಮೆರಾ ಡಿವಿಆರ್‌ ಅನ್ನು ನಾಗರತ್ನ, ಮೋನಿಕಾ ಅವರೇ ನೀರಿಗೆ ಬಿಸಾಡಿದ್ದರು ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment