ರಾಜ್ಯ ಸುದ್ದಿ

ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಬಂಧನ

ಬೆಂಗಳೂರು: ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ  ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಜಧಾನಿ ಡಕಾರ್‌ನಲ್ಲಿ ಇಂಟರ್‌ಪೋಲ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಟೋನಿ ಫೆರ್ನಾಂಡಿಸ್ ಹೆಸರಿನಲ್ಲಿ ಶ್ರೀಲಂಕಾದ ಪಾಸ್‌ಪೋರ್ಟ್‌ನಲ್ಲಿ ಓಡಾಡಿಕೊಂಡಿದ್ದ. 1992ರಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಆ ನಂತರ ರೈಲಿನಿಂದ ಹಾರಿ ತಪ್ಪಿಸಿಕೊಂಡಿದ್ದ. ಈತ ಕಳೆದ 26 ವರ್ಷಗಳಿಂದ ಭೂಗತ ಜಗತ್ತಿನಲ್ಲಿ ಸಕ್ರಿಯನಾಗಿದ್ದ. ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಖಡಕ್ಕಾರ್‌ನಲ್ಲಿ ಜನಿಸಿದ್ದ ಈತ ತಂದೆಯ ಜತೆ ಮುಂಬೈಗೆ ಹೋಗಿ ಅಲ್ಲೇ ಕೆಲಸ ಮಾಡಿಕೊಂಡಿದ್ದು, ಅಲ್ಲಿಂದಲೇ ಭೂಗತ ಜಗತ್ತಿನ ಸಂಪರ್ಕಕ್ಕೆ ಹೋದ ಎನ್ನುತ್ತವೆ ಪೊಲೀಸ್ ದಾಖಲೆಗಳು.

ಗುರುವಾರ ಮಧ್ಯಾಹ್ನ ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಈತ ಬಂಧಿತನಾಗಿದ್ದಾನೆ ಎನ್ನುವ ಸಂಗತಿಯನ್ನು ಗುರುವಾರ ರಾತ್ರಿ ವೇಳೆಗೆ ಅಂತರಾಷ್ಟ್ರೀಯ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದವು. ಕರ್ನಾಟಕ ಮತ್ತು ಮುಂಬೈನಲ್ಲಿ ಈತನ ವಿರುದ್ಧ 120ಕ್ಕೂ ಹೆಚ್ಚು ಪ್ರಕರಣಗಳಿವೆ. ಜತೆಗೆ ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಸೇರಿ ನಾನಾ ರಾಜ್ಯಗಳಲ್ಲೂ ಈತನ ವಿರುದ್ಧ ಕೊಲೆ, ಕೊಲೆಯತ್ನ, ಸುಲಿಗೆ, ಹಪ್ತಾ ವಸೂಲಿ , ಬೆದರಿಕೆ ಹಾಕಿದ ಪ್ರಕರಣಗಳು ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment