ರಾಜ್ಯ ಸುದ್ದಿ

ಕುಡಿಯುವ ನೀರಿನ ಬಾವಿಗೆ ವಿಷ ಬೆರೆಸಿದ ಪ್ರಕರಣದಲ್ಲಿ ಮಹಿಳೆ ಬಲಿ

ಯಾದಗಿರಿ: ಸುಳವಾಡಿಯಲ್ಲಿ ಪ್ರಸಾದಕ್ಕೆ ವಿಷ ಬೆರೆಸಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದುರಂತದ ಕರಾಳ ನೆನಪು ಇನ್ನೂ ಹಸಿಯಾಗಿರುವಾಗಲೇ ಕುಡಿಯುವ ನೀರಿನ ಬಾವಿಗೆ ವಿಷ ಬೆರೆಸಿದ ಪ್ರಕರಣದಲ್ಲಿ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಮೃತರನ್ನು ಸುರಪುರ ತಾಲೂಕಿನ ತೆಗ್ಗಿಹಳ್ಳಿ ನಿವಾಸಿ ಹೊನಮ್ಮ‌ಮಲ್ಲಪ್ಪ ಎಂದು ಗುರುತಿಸಲಾಗಿದೆ. ಬುಧವಾರ ನೀರು ಕುಡಿದ ಬಳಿಕ ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಗೆ ಕೆಂಭಾವಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯಲ್ಲಿ ಅಡ್ಮಿಟ್ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.


ಸುರುಪುರ ತಾಲೂಕಿನ ಮುದನೂರು ಗ್ರಾಮದಿಂದ ತೆಗ್ಗಿಹಳ್ಳಿ ಮತ್ತು ಶಾಖಾಪುರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ತೆರೆದ ಬಾವಿಗೆ ಕಿಡಿಗೇಡಿಗಳು ವಿಷ ಬೆರೆಸಿದ್ದಾರೆ.‌ ವಿಷಮಿಶ್ರಿತ ನೀರು ಕುಡಿದ ಐವರು ಅಸ್ವಸ್ಥರಾಗಿದ್ದಾರೆ. ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ‌ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕುಡಿಯುವ ನೀರಿಗೂ ವಿಷ ಬೆರೆಸಿದ ಹಿನ್ನೆಲೆಯಲ್ಲಿ ಶಾಖಾಪುರ ಮತ್ತು ತಗ್ಗಿಹಳ್ಳಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.


ಪಿಡಿಒಗೆ ಗೃಹ ಬಂಧನ: ವಿಷಮಿಶ್ರಿತ ನೀರು ಸೇವನೆಯಿಂದ ಮಹಿಳೆ ಮೃತಪಟ್ಟ ಸುದ್ದಿ ಗ್ರಾಮದಲ್ಲಿ ಹರಡುತ್ತಲೇ, ತೆಗ್ಗಿಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪಿಡಿಒ ಸಿದ್ರಾಮಪ್ಪ ಬರಡೋಲಗೆ ಗ್ರಾಮಸ್ಥರು ಗೃಹ ಬಂಧನ ವಿಧಿಸಿದ್ದಾರೆ. ಪಿಡಿಒ ಅವರನ್ನು ರೂಮಿನಲ್ಲಿ ಕೂಡಿ ಹಾಕಿದ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜನರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರಿಂದ ಎಲ್ಲೆಡೆ ಆತಂಕ ಸೃಷ್ಟಿಯಾಗಿದೆ.

About the author

ಕನ್ನಡ ಟುಡೆ

Leave a Comment