ರಾಜ್ಯ ಸುದ್ದಿ

ಬೆಳಗಾವಿ: ಕೆಎಲ್​ಇ ಭೌತಿಕ ಚಿಕಿತ್ಸಾ ಕೇಂದ್ರ ಆರಂಭ

ಬೆಳಗಾವಿ: ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನಿರ್ಮಸಲಾದ ಅತ್ಯಾಧುನಿಕ ಭೌತಿಕ ಚಿಕಿತ್ಸಾ (ಫಿಜಿಯೋಥೆರಪಿ) ಕೇಂದ್ರವನ್ನು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬುಧವಾರ ಲೋಕಾರ್ಪಣೆಗೊಳಿಸಿದರು.

ಹತ್ತು ವಿಶೇಷ ಕ್ಲಿನಿಕ್ ಹೊಂದಿರುವ ಈ ಕೇಂದ್ರದಲ್ಲಿ ಮಕ್ಕಳು, ವಯಸ್ಕರು, ಹಿರಿಯರು, ನರರೋಗ, ಎಲುಬು-ಕೀಲು, ಹೃದ್ರೋಗ, ಕ್ಯಾನ್ಸರ್, ಸ್ತ್ರೀರೋಗ ಸೇರಿ ವಿವಿಧ ಕಾಯಿಲೆಗಳಿಗೆ ಭೌತಿಕ ಚಿಕಿತ್ಸೆ ನೀಡಲಾಗುತ್ತದೆ. 15 ಸಾವಿರಕ್ಕಿಂತ ಅಧಿಕ ಚದರಡಿ ವಿಸ್ತಾರದ ಕೇಂದ್ರ ಇದಾಗಿದೆ.

ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ಮುಂಬೈ ಪ್ರಾಂತ್ಯದಲ್ಲಿ ಶಿಕ್ಷಣ ಸಂಸ್ಥೆಗಳು ಅತಿ ವಿರಳವಾಗಿದ್ದಾಗ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳಲು ಮೈಸೂರು ಮಹಾರಾಜರು ಸಹಕಾರ ನೀಡಿದ್ದಾರೆ. ಸಂಸ್ಥೆಯ ಅನೇಕ ಶಾಲೆಗಳನ್ನು ಲೋಕಾರ್ಪಣೆ ಮಾಡುವಲ್ಲಿ ಜಯಚಾಮರಾಜೇಂದ್ರ ಒಡೆಯರ್ ಮುಂಚೂಣಿಯಲ್ಲಿದ್ದರು ಎಂದು ಪ್ರಶಂಸಿದರು.

ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಕೆಎಲ್​ಇ ಸಂಸ್ಥೆ ಕಾರ್ಯ ಶ್ಲಾಘನೀಯ. ಸರ್ಕಾರಕ್ಕೆ ಪರ್ಯಾಯವಾದ ಸೌಲಭ್ಯ ಕೆಎಲ್​ಇ ಹೊಂದಿದೆ. ಪ್ರಭಾಕರ ಕೋರೆ ಅವರಂಥ 10 ಗಣ್ಯರು ರಾಜ್ಯದಲ್ಲಿದ್ದರೆ ಸರ್ಕಾರದ ಅಗತ್ಯ ಇರುವುದಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದರು. ಕೆಎಲ್​ಇ ಸಂಸ್ಥೆ ಮತ್ತು ರಾಜಮನೆತನಕ್ಕೆ ಅವಿನಾಭಾವ ಸಂಬಂಧವಿದೆ. 1951ರಲ್ಲೇ ಜಯಚಾಮರಾಜೇಂದ್ರ ಒಡೆಯರ್ ಅವರು ಲಿಂಗರಾಜ ಮಹಾವಿದ್ಯಾಲಯ, ಸವದತ್ತಿ ಮಹಾವಿದ್ಯಾಲಯವನ್ನು ಜನಸೇವೆಗೆ ಅರ್ಪಿಸಿದ್ದರು ಎಂದರು.

ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ನಿರ್ದೇಶಕ ಡಾ.ವಿ.ಎಸ್. ಸಾಧುನವರ, ವೈ.ಎಸ್. ಪಾಟೀಲ, ಅಶೋಕ ಬಾಗೇವಾಡಿ, ಬಿ.ಆರ್. ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ದೇಸಾಯಿ, ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಕುಲಪತಿ ಡಾ.ವಿವೇಕ ಸಾವೋಜಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಎಂ.ವಿ. ಜಾಲಿ, ಡಾ.ವಿ.ಡಿ. ಪಾಟೀಲ, ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಆರ್.ಎಸ್. ಮುಧೋಳ, ಡಾ.ಪ್ರೀತಿ ದೊಡವಾಡ, ಡಾ. ಸಂಜೀವಕುಮಾರ ಉಪಸ್ಥಿತರಿದ್ದರು.

About the author

ಕನ್ನಡ ಟುಡೆ

Leave a Comment