ರಾಜ್ಯ ಸುದ್ದಿ

ಕೆಪಿಎಸ್‌ಸಿಗೂ ಕಾಲಿಟ್ಟ ದೋಸ್ತಿಗಳ ಕುಸ್ತಿ: ಕರೀಗೌಡ ನೇಮಕಕ್ಕೆ ಜೆಡಿಎಸ್ ಒಲವು

ಬೆಂಗಳೂರು: ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮಧ್ಯೆ ಇನ್ನೊಂದು ಸುತ್ತಿನ ಅಸಮಾಧಾನ ಸೃಷ್ಟಿಯಾಗಿದ್ದು, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾಜಿ ಆಪ್ತ ಕಾರ್ಯದರ್ಶಿ ಕರಿಗೌಡ ನೇಮಕಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತೋರುತ್ತಿರುವ ಉತ್ಸಾಹಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ.

ಅಕ್ರಮ ನೇಮಕ ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನೇ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಮುಂದಿನ ದಿನಗಳಲ್ಲಿ ಆಡಳಿತಾತ್ಮಕವಾಗಿ ಭಾರಿ ಅವಾಂತರ ಸೃಷ್ಟಿಯಾಗುವ ಜತೆಗೆ ಎಚ್‌.ಎನ್‌.ಕೃಷ್ಣ ಅವಧಿಯಲ್ಲಿ ನಡೆದ ನೇಮಕ ಪರಂಪರೆಗೆ ಕೆಪಿಎಸ್‌ಸಿ ಮತ್ತೆ ಸಾಕ್ಷಿಯಾಗಬಹುದೆಂಬ ಆತಂಕವನ್ನು ಸಿದ್ದರಾಮಯ್ಯ ಬಣ ಹೊರಹಾಕಿದೆ. 1998ನೇ ಸಾಲಿನ ಕೆಎಎಸ್‌ ಅಧಿಕಾರಿಯಾಗಿರುವ ಕರೀಗೌಡ ಸದ್ಯಕ್ಕೆ ಐಎಎಸ್‌ ಅಧಿಕಾರಿಯಾಗಿ ಬಡ್ತಿ ಪಡೆದಿದ್ದಾರೆ. ಆದರೆ 1998, 1999 ಹಾಗೂ 2004ನೇ ಸಾಲಿನ ನೇಮಕದಲ್ಲಿ ಅಕ್ರಮವಾಗಿದೆ ಎಂದು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸಾಲಿನಲ್ಲಿ ಆಯ್ಕೆಯಾದ 47 ಮಂದಿಯನ್ನು ಅನರ್ಹ ಎಂದು ಗುರುತಿಸಲಾಗಿದೆ. ಇದು ಜಾರಿಯಾದರೆ ಕರೀಗೌಡ ಸೇರಿದಂತೆ ಎಂಟು ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. ಹೀಗಾಗಿ ಇಂಥ ಅಧಿಕಾರಿ ಕೆಪಿಎಸ್‌ಸಿ ಅಧ್ಯಕ್ಷರಾಗುವುದು ಬೇಡ ಎಂಬುದು ಕಾಂಗ್ರೆಸ್‌ನ ಒಂದು ಬಣದ ಅಭಿಪ್ರಾಯ.

ಕರೀಗೌಡ ನೇಮಕಕ್ಕೆ ಈಗಾಗಲೇ ಸಾರ್ವಜನಿಕ ವಲಯದಲ್ಲೂ ಆಕ್ಷೇಪ ವ್ಯಕ್ತವಾಗಿದ್ದು, ರಾಜ್ಯಪಾಲರಿಗೆ ದೂರು ನೀಡುವ ಬಗ್ಗೆ ಸಾಮಾಜಿಕ ಹೋರಾಟಗಾರರು ಸಿದ್ಧತೆ ಆರಂಭಿಸಿದ್ದಾರೆ. ಇದರ ಜತೆಗೆ ತಮ್ಮ ಆಪ್ತರಾದ ರಘುನಂದನ್‌ ರಾಮಣ್ಣ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರಾಗಿ ಮಾಡುವುದಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಪಟ್ಟು ಹಿಡಿದಿದ್ದಾರೆ. ಆದರೆ ದೇವೇಗೌಡ ಹಾಗೂ ಕುಮಾರಸ್ವಾಮಿ ಇದಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಈ ಮಧ್ಯೆ ಮೈಸೂರು ಭಾಗಕ್ಕೆ ಸೇರಿದ ಪ್ರಬಲ ಮಠಾಧೀಶರೊಬ್ಬರ ಸೋದರ ಹಾಗೂ ಕೆಪಿಎಸ್‌ಸಿ ಹಾಲಿ ಸದಸ್ಯ ಷಡಕ್ಷರಿಸ್ವಾಮಿ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಕ ಮಾಡಬೇಕೆಂಬ ಬಗ್ಗೆ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ. ಚುನಾವಣೆ ದೃಷ್ಟಿಯಿಂದ ಇದು ಅನುಕೂಲ ಮಾಡಿಕೊಡಬಹುದೆಂಬ ವಾದವೂ ಇದೆ. ಹೀಗಾಗಿ ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ರಾಜ್ಯದ ಎರಡು ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಹೆಸರು ಮುಂಚೂಣಿಗೆ ಬಂದಂತಾಗಿದೆ. ಕರೀಗೌಡ ನೇಮಕಕ್ಕೆ ಕಾಂಗ್ರೆಸ್‌ ಪಾಳಯದಿಂದ ವಿರೋಧ ವ್ಯಕ್ತವಾಗಬುದೆಂಬ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಜ್ಞರ ನೇಮಕವಾಗಬೇಕೆಂದು ಹೇಳುವ ಮೂಲಕ ಪರೋಕ್ಷವಾಗಿ ದೇವೇಗೌಡರು ಸಿದ್ದರಾಮಯ್ಯಗೆ ಟಾಂಗ್‌ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment