ರಾಜ್ಯ ಸುದ್ದಿ

ಕೆಪಿಎಸ್‌ಸಿ: ಆನ್‌ಲೈನ್‌ ಅರ್ಜಿಗೆ ತಾಂತ್ರಿಕ ಅಡ್ಡಿ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಹೈದರಾಬಾದ್‌ ಕರ್ನಾಟಕ ವೃಂದದ ಗ್ರೂಪ್‌ ‘ಎ’ ಹಾಗೂ ‘ಬಿ’ ವೃಂದದ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಆಹ್ವಾನಿಸಿರುವ ಅರ್ಜಿ ಭರ್ತಿ ಮಾಡಲು ತಾಂತ್ರಿಕ ತೊಂದರೆ ಉಂಟಾಗಿದ್ದು, ಅಭ್ಯರ್ಥಿಗಳು ಸಮಸ್ಯೆಗೆ ಒಳಗಾಗಿದ್ದಾರೆ.

ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ ಆಪ್ಶನ್‌ ಎಂಟ್ರಿ ಮಾಡುವ ಪ್ರಕ್ರಿಯೆ ವೇಳೆ ಸಮಸ್ಯೆಯಾಗುತ್ತಿದೆ. ಹೆಚ್ಚಿನ ಪ್ರಕರಣಗಳಲ್ಲಿ ‘ನೀವು ಈ ಹುದ್ದೆಗೆ ಅರ್ಹರಲ್ಲ’ ಎಂಬ ಮಾಹಿತಿ ಕಂಪ್ಯೂಟರ್‌ ಪರದೆ ಮೇಲೆ ಮೂಡುತ್ತಿದೆ. ಹಲವು ಪ್ರಯತ್ನಗಳ ಬಳಿಕವೂ ಅರ್ಜಿ ಭರ್ತಿ ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ತೋಟಗಾರಿಕೆ, ಗ್ರಂಥಾಲಯ, ಕಾರ್ಮಿಕ ಇಲಾಖೆ ಹಾಗೂ ಕೃಷಿ ಮಾರಾಟ ಮಂಡಳಿಗೆ ಸೇರಿದ ಒಟ್ಟು 126 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮೂರು ಇಲಾಖೆಗಳಲ್ಲಿ ಕಡಿಮೆ ಸಂಖ್ಯೆಯ ಹುದ್ದೆಗಳಿರುವ ಕಾರಣ ಸಹಜವಾಗಿ ಹೈ-ಕ ಭಾಗದ ಅಭ್ಯರ್ಥಿಗಳು ಸರಕಾರಿ ಉದ್ಯೋಗ ಗಿಟ್ಟಿಸಲು ಪೈಪೋಟಿ ನಡೆಸಿದ್ದಾರೆ. ಅರ್ಜಿ ಸಲ್ಲಿಸಲು ಮುಂದಿನ ಜ.16 ಕೊನೆಯ ದಿನವಾಗಿದ್ದರೂ, ತಾಂತ್ರಿಕ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ ಹುದ್ದೆ ಪಡೆಯುವುದು ಮರೀಚಿಕೆಯಾಗುತ್ತದೆ ಎಂಬ ಆತಂಕ ಹಲವರಲ್ಲಿ ಮೂಡಿದೆ.

ಸಹಾಯವಾಣಿಯಲ್ಲೂ ಸಿಗದ ಸ್ಪಂದನೆ ಸಮಸ್ಯೆ ಕುರಿತು ಆಯೋಗದ ಸಹಾಯವಾಣಿ ಕಚೇರಿಗೆ ಕರೆ ಮಾಡಿದರೆ ದೂರವಾಣಿ ಕಾರ್ಯನಿರತವಾಗಿದೆ ಎಂಬ ದನಿ ಆ ಕಡೆಯಿಂದ ಬರುತ್ತಿದೆ. ಇದರಿಂದ ಬೇಸತ್ತಿರುವ ಅಭ್ಯರ್ಥಿಗಳು ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಅಳಲು ವ್ಯಕ್ತಪಡಿಸಿದರು. 

About the author

ಕನ್ನಡ ಟುಡೆ

Leave a Comment