ರಾಷ್ಟ್ರ ಸುದ್ದಿ

ಕೆಸಿಆರ್ ರ್ಯಾಲಿ: ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಬಂಧನ

ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದ್ದು, ತೆಲಂಗಾಣ ರಾಜ್ಯ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ರ್ಯಾಲಿ ನಡೆಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿಯವರನ್ನು ಮಂಗಳವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೆಲವರು ಮನೆಯ ಬಾಗಿಲು ಬಡಿದರು. ಬಳಿಕ ಬಾಗಿಲು ತೆಗೆಯುತ್ತಿದ್ದಂತೆ ಒಳ ಬಂದವರು ಪತಿಯನ್ನು ಬಂಧನಕ್ಕೊಳಪಡಿಸದರು ಎಂದು ರೇವತ್ ರೆಡ್ಡಿಯವರ ಪತ್ನಿ ಗೀತಾ ಅವರು ಹೇಳಿದ್ದಾರೆ.

ನನ್ನ ಪತಿ, ಮಗಳೊಂದಿಗೆ ರೂಮಿನಲ್ಲಿ ಮಲಗಿದ್ದರು. ಇದ್ದಕ್ಕಿದ್ದಂತೆ ಒಳಬಂದು ಅವರನ್ನು ಬಂಧನಕ್ಕೊಳಪಡಿಸಿದರು. ನಾವೇನೂ ಉಗ್ರರೇ? ನಮ್ಮೊಂದಿಗೆ ಈ ರೀತಿ ನಡೆದುಕೊಳ್ಳಲು ಎಂದು ಪ್ರಶ್ನಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಚುನಾವಣಾ ಆಯೋಗದ ಆದೇಶದ ಮೇರೆಗೆ ರೆಡ್ಡಿಯವರನ್ನು ಬಂಧನಕ್ಕೊಳಪಡಿಸಲಾಗಿದೆ. ತಮ್ಮ ಕ್ಷೇತ್ರದ ಜನರಿಗೆ ಟಿಆರ್’ಎಸ್ ಮುಖ್ಯಸ್ಥನ ಸಭೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸುವಂತೆ ರೆಡ್ಡಿ ಕರೆ ನೀಡಿದ್ದ ಹಿನ್ನಲೆಯಲ್ಲಿ ಆಯೋಗ ಬಂಧನಕ್ಕೊಳಪಡಿಸುವಂತೆ ಆದೇಶಿಸಿತ್ತು ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕೂವರೆ ವರ್ಷಗಳಿಂದಲೂ ಕೊಡಂಗಲ್ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೊಂಡಿಲ್ಲ. ಕೊಡಂಗಲ್’ಗೆ ಡಿ.4 ರಂದು ಕೆಸಿಆರ್ ಭೇಟಿ ನೀಡುತ್ತಿದ್ದು, ಭೇಟಿಗೂ ಮುನ್ನ ಕ್ಷಮೆಯಾಚಿಸಬೇಕೆಂದು ಈ ಹಿಂದೆ ರೇವಂತ್ ರೆಡ್ಡಿ ಆಗ್ರಹಿಸಿದ್ದರು.

About the author

ಕನ್ನಡ ಟುಡೆ

Leave a Comment