ರಾಷ್ಟ್ರ ಸುದ್ದಿ

ಕೇಂದ್ರಕ್ಕೆ ಭರ್ಜರಿ ಟಾಂಗ್ ಕೊಟ್ಟ ಸಿಎಂ ನಾಯ್ಡು, ಆಂಧ್ರ ಪ್ರದೇಶದಲ್ಲಿ ಸಿಬಿಐ ತನಿಖೆಗೆ ನಿಷೇಧ

ನವದೆಹಲಿ: ಸಿಬಿಐ ಮೂಲಕ ಕೇಂದ್ರದ ಮೋದಿ ಸರ್ಕಾರ ವಿರೋಧಿಗಳನ್ನು ಹಣಿಯುತ್ತಿದೆ ಎಂಬ ಆರೋಪಗಳ ನಡುವೆಯೇ ಕೇಂದ್ರ ಸರ್ಕಾರಕ್ಕೆ ಭರ್ಜರಿ ಟಾಂಗ್ ಕೊಟ್ಟಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಸಿಬಿಐ ನೀಡಲಾಗಿದ್ದ ತನಿಖಾಧಿಕಾರವನ್ನು ಹಿಂದಕ್ಕೆ ತೆಗೆದುಕೊಂಡಿದೆ.
ಅದರಂತೆ ಇನ್ನು ಮುಂದೆ ಆಂಧ್ರ ಪ್ರದೇಶದಲ್ಲಿ ಸಿಬಿಐ ಯಾವುದೇ ರೀತಿಯ ತನಿಖೆ ನಡೆಸಬೇಕು ಎಂದರೂ ರಾಜ್ಯ ಸರ್ಕಾರದ ಅನುಮತಿ ಇರದ ಹೊರತು ತನಿಖೆ ನಡೆಸುವಂತಿಲ್ಲ ಎನ್ನಲಾಗಿದೆ. ಈ ಬಗ್ಗೆ ಆಂಧ್ರ ಪ್ರದೇಶ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ನಿರ್ಣಯ ಕೈಗೊಂಡಿದ್ದು, ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಲಾಗಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದುಕೊಂಡಿದೆ. ಸರ್ಕಾರದ ಈ ನಿರ್ಣಯದಿಂದಾಗಿ ಆಂಧ್ರ ಪ್ರದೇಶದಲ್ಲಿ ಸಿಬಿಐನ ಅಧಿಕಾರಕ್ಕೆ ಕತ್ತರಿ ಬಿದ್ದಿದ್ದು, ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಕಚೇರಿಗಳು ಮತ್ತು ಕೇಂದ್ರ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಲು ಅಥವಾ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಂಧ್ರ ಪ್ರದೇಶ ಸರ್ಕಾರ ಸಿಬಿಐ ಸಂಸ್ಥೆಗೆ ನೀಡಲಾಗಿದ್ದ ತನಿಖಾನುಮತಿಯನ್ನು ರದ್ದುಗೊಳಿಸಲಾಗಿದ್ದು, ಸಿಬಿಐ ಅಧೀನದಲ್ಲಿರುವ ಎಲ್ಲ ಪ್ರಕರಣಗಳ ತನಿಖಾ ಜವಾಬ್ದಾರಿಯನ್ನೂ ಎಸಿಬಿಗೆ ವರ್ಗಾವಣೆ ಮಾಡುವುದಾಗಿ ಹೇಳಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆಂಧ್ರ ಪ್ರದೇಶ ಗೃಹ ಮಂತ್ರಿ ಚಿನ್ನರಾಜಪ್ಪ ಅವರು, ಸಿಬಿಐ ದುರ್ಬಳಕೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ. ಕೇವಲ ಆಂಧ್ರ ಪ್ರದೇಶ ಮಾತ್ರವಲ್ಲ ಕರ್ನಾಟಕ, ತಮಿಳುನಾಡು ಸರ್ಕಾರಗಳೂ ಕೂಡ ಈ ಕ್ರಮ ಕೈಗೊಂಡಿದ್ದವು ಎಂದು ರಾಜಪ್ಪ ಹೇಳಿದ್ದಾರೆ.
ಇನ್ನು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸಿಬಿಐ ವಿವಾದ ಬಾರಿ ಸುದ್ದಿಗೆ ಗ್ರಾಸವಾಗಿದ್ದು, ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ವಿಚಾರಣೆ ನಡೆಸುತ್ತಿದೆ. ಇದರ ನಡುವೆಯೇ ಆಂಧ್ರ ಪ್ರದೇಶ ಸರ್ಕಾರದ ಈ ಕ್ರಮ ಕೇಂದ್ರ ಸರ್ಕಾರ ಮತ್ತು ಸಿಬಿಐ ಸಂಸ್ಥೆಯನ್ನು ಭಾರಿ ಮುಜುಗರಕ್ಕೀಡು ಮಾಡಿದೆ.
ಇನ್ನು ದೇಶದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಸಿಬಿಐ ದೆಹಲಿಯನ್ನು ಹೊರತು ಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ತನಿಖೆ ನಡೆಸಬೇಕು ಎಂದರೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯವಾಗಿರಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

About the author

ಕನ್ನಡ ಟುಡೆ

Leave a Comment