ರಾಜಕೀಯ

ಕೇಂದ್ರದ ಪ್ರತಿ ಸಚಿವಾಲಯದಲ್ಲೂ ಆರ್ ಎಸ್ಎಸ್ ವ್ಯಕ್ತಿ ಇದ್ದಾರೆ: ರಾಹುಲ್

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತಿ ಸಚಿವಾಲಯದಲ್ಲೂ ಆರ್ ಎಸ್ ಎಸ್ ವ್ಯಕ್ತಿಗಳಿಗೆ ಸ್ಥಾನ ನೀಡುವ ಮೂಲಕ ದೇಶದ ಜನತೆಗೆ ಅಗೌರವ ತೋರುತ್ತಿದ್ದಾರೆ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
ಇಂದು ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ವರ್ತಕರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಂಸ್ಥೆಗಳನ್ನು ಆರ್ ಎಸ್ಎಸ್ ನಿಯಂತ್ರಣ ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಜಿಎಸ್ ಟಿಯನ್ನು ಸರಳಗೊಳಿಸುವುದಾಗಿ ರಾಹುಲ್ ಭರವಸೆ ನೀಡಿದ್ದಾರೆ. ಕೇಂದ್ರದ ಪ್ರತಿ ಸಚಿವಾಲಯದಲ್ಲೂ ಒಬ್ಬ ಆರ್ ಎಸ್ಎಸ್ ವ್ಯಕ್ತಿ ಇದ್ದು, ಅವರೇ ಆದೇಶ ನೀಡುತ್ತಿದ್ದಾರೆ. ಅಂತವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ? ಇಂತವರಿಂದಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯೇ ಹಾಳಾಗಿ ಹೋಗಿದೆ ಎಂದರು. ಭಾರತೀಯ ರಿಸರ್ವೆ ಬ್ಯಾಂಕ್ ನಂತಹ ಹಣಕಾಸು ಸಂಸ್ಥೆಗಳಿಗೆ ನೀವು ಗೌರವ ಕೊಡದಿದ್ದರೆ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂತವರು ಹುಟ್ಟಿಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಭ್ರಷ್ಟರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ನೀರವ್ ಮೋದಿ 30 ಸಾವಿರ ಕೋಟಿ ರುಪಾಯಿ, ವಿಜಯ್ ಮಲ್ಯ, ಲಲಿತ್ ಮೋದಿ ಅವರು ನೂರಾರು ಕೋಟಿ ಜನರ ದುಡ್ಡು ಲೂಟಿ ಹೊಡೆದಿದ್ದಾರೆ. ಅವರೆಲ್ಲ ದೇಶ ಬಿಟ್ಟು ಹೊರ ರಾಷ್ಟ್ರದಲ್ಲಿ ನೆಲೆಸಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿನ ಪ್ರತಿಯೊಬ್ಬರ ಪ್ರಗತಿಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಎಲ್ಲಾ ರಾಜ್ಯಗಳು, ಭಾಷೆಗಳು, ಅವರ ಸಂಪ್ರದಾಯ, ಮತ್ತು ಸಂಸ್ಕೃತಿಯನ್ನು ಕಾಂಗ್ರೆಸ್ ಗೌರವಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.

About the author

ಕನ್ನಡ ಟುಡೆ

Leave a Comment