ರಾಷ್ಟ್ರ ಸುದ್ದಿ

ಕೇಂದ್ರ ಸರ್ಕಾರಕ್ಕೆ ಮುಖಭಂಗ: ಸಿಬಿಐ ನಿರ್ದೇಶಕರಾಗಿ ಮುಂದುವರಿಯಲು ಅಲೋಕ್ ವರ್ಮಾಗೆ ಸುಪ್ರೀಂ ಸೂಚನೆ

ನವದೆಹಲಿ: ಕೇಂದ್ರ ಸರ್ಕಾರದ ಆದೇಶವನ್ನು ಪಕ್ಕಕ್ಕೆ ಸರಿಸಿರುವ ಸುಪ್ರೀಂಕೋರ್ಟ್, ಸಿಬಿಐ ನಿರ್ದೇಶಕರಾಗಿ ಮತ್ತೆ ಮುಂದುವರೆಯುವಂತೆ ಅಲೋಕ್ ವರ್ಮಾ ಅವರಿಗೆ ಸೋಮವಾರ ಸೂಚನೆ ನೀಡಿದೆ.
ತಮ್ಮ ಅಧಿಕಾರಕ್ಕೆ ಕತ್ತರಿ ಹಾಕಿ ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ಪ್ರಕಟಿಸಿದ್ದು, ಕಡ್ಡಾಯ ರಜೆ ಮೇಲೆ ಅಲೋಕ್ ವರ್ಮಾವನ್ನು ಕಳುಹಿಸಿರುವ ಕೇಂದ್ರ ಸರ್ಕಾರದ ಆದೇಶ ತಪ್ಪು ಎಂದು ಹೇಳಿದೆ. ಹುದ್ದೆಯಿಂದ ಕೆಳಗಿಳಿಸುವ ಮುನ್ನ ಸಿಜೆಐ, ಪ್ರಧಾನಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿಯಲ್ಲಿ ಕೇಂದ್ರ ಚರ್ಚೆ ನಡೆಸಬೇಕಿತ್ತು ಎಂದು ಹೇಳಿರುವ ನ್ಯಾಯಾಲಯ, ಕೇಂದ್ರ ಸರ್ಕಾರದ ಆದೇಶವನ್ನು ತಿರಸ್ಕರಿಸಿ ಮತ್ತೆ ಸಿಬಿಐ ನಿರ್ದೇಶಕ ಹುದ್ದೆಯಲ್ಲಿ ಮುಂದುವರೆಯುವಂತೆ ಅಲೋಕ್ ವರ್ಮಾ ಅವರಿಗೆ ಸೂಚಿದೆ. ಅಲ್ಲದೆ, ಸದ್ಯಕ್ಕೆ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವಂತಿಲ್ಲ ಎಂದು ತಿಳಿಸಿದೆ.
ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರು ಲಂಚ ಸ್ವೀಕಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪರಸ್ಪರ ಕಿತ್ತಾಡಿಕೊಂಡಿದ್ದರು. ಸಿಬಿಐ ಅಧಿಕಾರಿಯೇ ಸಿಬಿಐ ಅಧಿಕಾರಿ ವಿರುದ್ಧ ತಿರುಗಿ ಬಿದ್ದಿದ್ದರಿಂದ ಮುಜುಗರಕ್ಕೀಡಾಗಿದ್ದ ಸರ್ಕಾರ, ಈ ಇಬ್ಬರನ್ನೂ ಕಡ್ಡಾಯ ರಜೆ ಮೇಲೆ ಕಳುಹಿಸಿ ಎಂ.ನಾಗೇಶ್ವರ್ ಅವರಿಗೆ ಸಿಬಿಐ ಉಸ್ತುವಾರಿವಹಿಸಿತ್ತು. ಇದನ್ನು ಪ್ರಶ್ನಿಸಿ ವರ್ಮಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶ ನ್ಯಾ.ರಂಜನ್ ಗೊಗೋಯ್ ಅವರ ಪೀಠ, ಡಿ.8ಕ್ಕೆ ತೀರ್ಪು ಕಾಯ್ದಿರಿಸಿತ್ತು.

About the author

ಕನ್ನಡ ಟುಡೆ

Leave a Comment