ರಾಷ್ಟ್ರ ಸುದ್ದಿ

ಕೇಂದ್ರ ಸರ್ಕಾರದಿಂದ ದೇಶದ ಆರ್ಥಿಕ ಹಾಗೂ ರಾಜಕೀಯ ಸ್ಥಿರತೆ ನಾಶ- ಮಮತಾ ಆರೋಪ !

ಕೊಲ್ಕತ್ತಾ : ಕೇಂದ್ರಸರ್ಕಾರ ದೇಶದ ಆರ್ಥಿಕ ಹಾಗೂ ರಾಜಕೀಯ ಸ್ಥಿರತೆಯನ್ನು ನಾಶಪಡಿಸುತ್ತಿದೆ ಎಂದು ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಆರ್ಥಿಕ ಸ್ಥಿರತೆ ಇಲ್ಲದೆ ರಾಜಕೀಯ ಸ್ಥಿರತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ರಾಜಕೀಯ ಪಕ್ಷಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಆರ್ ಎಸ್ ಎಸ್ ವರ್ತಿಸುತ್ತಿದೆ ಎಂದು  ಕಿಡಿಕಾರಿದ್ದಾರೆ.ದೇಶದ ಇಡೀ ಆರ್ಥಿಕ ವ್ಯವಸ್ಥೆ ಅಪಾಯದ ಸ್ಥಿತಿಯಲ್ಲಿದೆ. ಇದನ್ನು ಬದಲಾವಣೆ ಮಾಡಿ ದೇಶವನ್ನು ರಕ್ಷಿಸಬೇಕಾಗಿದೆ. ಒಂದು ವೇಳೆ ಆರ್ಥಿಕ ಸ್ಥಿರತೆ ಇಲ್ಲದಿದ್ದರೆ  ಯಾವುದೇ ರಾಜಕೀಯ ಸ್ಥಿರತೆಯೂ ಮೂಡಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ಬ್ಯಾನರ್ಜಿ ಸುದ್ದಿಗಾರರಿಗೆ ಹೇಳಿದರು. ತೈಲ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಮತಾ, ತೆರಿಗೆಗಳನ್ನು ಕಡಿತಗೊಳಿಸುವಂತೆ ರಾಜ್ಯಗಳನ್ನು ಕೇಳುವ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ದರದಲ್ಲಿ   10 ರೂ. ಇಳಿಕೆ ಮಾಡಬೇಕು   ಎಂದು ಅವರು ಹೇಳಿದರು. ಬಿಜೆಪಿ ಸರ್ಕಾರನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಮುಂದಿನ ವರ್ಷದ ಜನವರಿ 19 ರಂದು ಕೊಲ್ಕತ್ತಾದಲ್ಲಿ ಆಯೋಜಿಸುವ ಮಹಾಮೈತ್ರಿ ಚುನಾವಣಾ ಯಾತ್ರೆಯಲ್ಲಿ ಸಮಾನ ಮನಸ್ಸಿನ ದೇಶದ ಎಲ್ಲಾ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಅನೇಕ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲಾ ಪ್ರತಿಪಕ್ಷಗಳನ್ನು ಆಹ್ವಾನಿಸಲಾಗುತ್ತಿದೆ. ಸಿಪಿಐ (ಎಂ) ಆರ್ ಎಸ್ ಪಿ, ಮತ್ತು ಫಾರ್ವಡ್ ಬ್ಲಾಕ್ ಸೇರಿದಂತೆ ಎಲ್ಲರೂ ಆಹ್ವಾನಿಸಲಾಗುವುದು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 1 ಸ್ಥಾನದಲ್ಲಿಯೂ ಗೆಲ್ಲದಂತೆ ಪ್ರತಿಯೊಬ್ಬರಲ್ಲೂ ಮನವಿ ಮಾಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದರು.

About the author

ಕನ್ನಡ ಟುಡೆ

Leave a Comment