ಪರಿಸರ

ಕೇರಳ: ಭಾರಿ ಮಳೆಗೆ ಪ್ರವಾಹ, ಭೂಕುಸಿತಕ್ಕೆ ನಾಲ್ವರು ಸಾವು, 10 ಮಂದಿ ಕಣ್ಮರೆ

ತಿರುವನಂತಪುರ: ಕೇರಳದ ಉತ್ತರ ಭಾಗದಲ್ಲಿ ಭಾರಿ ಮಳೆ ಬೀಳುತ್ತಿದ್ದು, ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಗುರುವಾರ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟು, 10 ಮಂದಿ ಕಣ್ಮರೆಯಾಗಿದ್ದಾರೆ. ಬುಧವಾರ ಇಡೀ ರಾತ್ರಿ ಬಿದ್ದ ಭಾರಿ ಮಳೆಗೆ ಕೊಯಿಕ್ಕೋಡ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಳಿಗ್ಗೆ ಭೂಕುಸಿತ ಉಂಟಾದ ಘಟನೆ ನಡೆದಿದ್ದು, ನಾಲ್ವರು ಸಾವಿಗೀಡಾಗಿ, 10 ಜನ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. ಮೇ ಕೊನೆಯ ವಾರ ನೈಋತ್ಯ ಮುಂಗಾರು ಆರಂಭವಾದ ಬಳಿಕ, ಇಲ್ಲಿಯವರೆಗೆ ರಾಜ್ಯದಲ್ಲಿ ಮೃತರ ಸಂಖ್ಯೆ 27ಕ್ಕೇರಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಕೊಯಿಕ್ಕೋಡ್‌, ಮಲಪ್ಪುರಂ, ಕಣ್ಣೂರು, ವಯನಾಡು, ಕಾಸರಗೋಡು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಭೂಕುಸಿತ ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ.

ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳಲ್ಲಿ ನೀರಿನಮಟ್ಟ ಬಹುತೇಕ ಗರಿಷ್ಠ ಮಿತಿ ತಲುಪಿವೆ. ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಪ್ರವಾಹಕ್ಕೆ ರಸ್ತೆಗಳು ಕೊಚ್ಚಿಹೋಗಿದ್ದು, ಹಲವೆಡೆ ಹಾನಿಗೊಳಗಾಗಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಎಂಟು ಮನೆಗಳು ಪೂರ್ಣ ಹಾನಿಗೊಳಗಾಗಿರುವುದು ಸೇರಿದಂತೆ ರಾಜ್ಯದಲ್ಲಿ 270 ಮನೆಗಳಿಗೆ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment