ರಾಜಕೀಯ

ಕೈ ಗೆ ಸಿಗದ ರಮೇಶ್ ಜಾರಕಿಹೊಳಿ: ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ

ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಅತೃಪ್ತಿ ಭುಗಿಲೆದ್ದಿದ್ದು, ಕಣ್ಮರೆಯಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆಂಬುದು ಈ ವರೆಗೂ ಯಾರಿಗೂ ತಿಳಿಯುತ್ತಿಲ್ಲ. ಈ ನಡುವೆ ರಮೇಶ್ ಜಾರಕಿಹೊಳಿಯವರು ಶೀಘ್ರದಲ್ಲಿಯೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂಬ ವದಂತಿಗಳು ಹರಡಲು ಆರಂಭಿಸಿವೆ.
ಪರಮೇಶ್ವರ್ ಅವರಿಂದ ಗೃಹ ಸಚಿವ ಖಾತೆಯನ್ನು ಕಸಿದುಕೊಂಡ ಕಾಂಗ್ರೆಸ್ ಲಿಂಗಾಯತ ನಾಯಕ ಎಂ.ಬಿ. ಪಾಟೀಲ್ ಅವರಿಗೆ ನೀಡಿದ ಬಳಿಕ ದಲಿತ ವಿರೋಧಿಯೆಂಬ ಹಣೆಪಟ್ಟಿಯನ್ನು ಎದುರಿಸುತ್ತಿದೆ. ಇದರ ಬೆನ್ನಲ್ಲೇ ಜಾರಕಿಹೊಳಿ ಕಣ್ಮರೆಯಾಗಿ ಯಾವುದೇ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೇ ಇರುವುದು ಹಲವು ಅನುಮಾನಗಳನ್ನು ಮೂಡುವಂತೆ ಮಾಡಿದೆ. ಇದಕ್ಕೆ ಇಂಬು ನೀಡುವಂತೆ ಜಾರಿಹೊಳಿಯವರು ರಾಜಧಾರಿ ದೆಹಲಿಯಲ್ಲಿದ್ದು, ಬಿಜೆಪಿ ನಾಯಕರ ಆತಿಥ್ಯ ಆಹ್ಲಾದಿಸುತ್ತಿದ್ದಾರೆಂಬ ಮಾತುಗಳು ಕೇಳಿಬರತೊಡಗಿವೆ.
ಬಿಜೆಪಿ ನಾಯಕರು ಈಗಾಗಲೇ ದೆಹಲಿಯಲ್ಲಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ರಮೇಶ್ ಜಾರಕಿಹೊಳಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಬಿಜೆಪಿ ಸೇರ್ಪಡೆಗೊಂಡ ಬಳಿಕ ಬಿಜೆಪಿಯಿಂದ ಟಿಕೆಟ್ ಪಡೆದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂಬ ವದಂತಿಗಳು ಹರಡತೊಡಗಿವೆ. ರಮೇಶ್ ಜಾರಕಿಹೊಳಿಯವರೊಂದಿಗೆ ಮತ್ತಷ್ಟು ಕಾಂಗ್ರೆಸ್ ಶಾಸಕರೂ ಕೂಡ ಇದ್ದು, ಇದರಲ್ಲಿ ಇಬ್ಬರು ಬಳ್ಳಾರಿ ಶಾಸಕರಿದ್ದಾರೆ. ಈ ಎಲ್ಲಾ ಶಾಸಕರೂ ಕೂಡ ಜಾರಕಿಹೊಳಿ ನಡೆಯನ್ನೇ ಅನುಸರಿಸಲಿದ್ದಾರೆಂದು ಹೇಳಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment