ರಾಜಕೀಯ

ಕೈ ಭಿನ್ನರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ದಿಲ್ಲಿಯಲ್ಲಿ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರೊಂದಿಗೆ ದೋಸ್ತಿ ಸರಕಾರಕ್ಕೆ ನಡುಕ ಶುರುವಾಗಿದ್ದು, ಅತಿ ಶೀಘ್ರದಲ್ಲೆ ಬಂಡಾಯ ಶಾಸಕರ ರಾಜೀನಾಮೆ ಪರ್ವ ಪ್ರಾರಂಭವಾಗಬಹುದು ಎಂಬ ಮುನ್ಸೂಚನೆ ಸಿಕ್ಕಿದೆ.

ಸಂಪುಟದಿಂದ ವಜಾಗೊಳಿಸಿದ್ದರಿಂದ ಸಿಟ್ಟಾಗಿರುವ ರಮೇಶ್‌ ಜಾರಕಿಹೊಳಿ ನಂತರ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬಿಜೆಪಿ ನಾಯಕರೊಂದಿಗೆ ಸತತ ಸಂಪರ್ಕದಲ್ಲಿದ್ದ ಅವರು ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿದ್ದರು. ಮಹಾರಾಷ್ಟ್ರ ಬಿಜೆಪಿ ನಾಯಕರೊಂದಿಗೂ ಸಮಾಲೋಚಿಸಿದ್ದರು ಎಂಬ ವರದಿಯಾಗಿತ್ತು. ಬಳಿಕ ಅವರು ಕೆಲ ದಿನಗಳಿಂದ ದಿಲ್ಲಿಯಲ್ಲೆ ವಾಸ್ತವ್ಯ ಹೂಡಿದ್ದರು. ಇದೀಗ ತಮ್ಮೊಂದಿಗೆ ಗುರುತಿಸಿಕೊಂಡಿರುವ 5-6 ಶಾಸಕರೊಂದಿಗೆ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದಾರೆಂದು ಉನ್ನತ ಮೂಲಗಳಿಂದ ಖಚಿತಪಟ್ಟಿದೆ.

ಜಾರಕಿಹೊಳಿ ಜತೆಗೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ನಾಗೇಂದ್ರ, ಪಕ್ಷೇತರರಾದ ಆರ್‌.ಶಂಕರ್‌ ಹಾಗೂ ಇನ್ನೂ ಕೆಲವರಿದ್ದಾರೆ. ಈ ಗುಂಪಿನ ನೇತೃತ್ವ ವಹಿಸಿಕೊಂಡಿರುವ ಜಾರಕಿಹೊಳಿ ಮುಂದಿನ ತಂತ್ರಗಾರಿಕೆಯ ಬಗ್ಗೆ ಬಿಜೆಪಿ ಅಧ್ಯಕ್ಷರೊಂದಿಗೆ ಚರ್ಚಿಸಿದ್ದಾರೆ. ರಾಜ್ಯ ಬಿಜೆಪಿಯ ಹಿರಿಯ ನಾಯಕರೇ ಈ ಭೇಟಿಗೆ ವ್ಯವಸ್ಥೆ ಮಾಡಿದ್ದರು. ಇದಲ್ಲದೆ ಸುಮಾರು 18 ಕಾಂಗ್ರೆಸ್‌ ಶಾಸಕರೊಂದಿಗೆ ಬಿಜೆಪಿ ನಾಯಕರು ಖುದ್ದು ಸಂಪರ್ಕದಲ್ಲಿದ್ದಾರೆ. ಈ ಶಾಸಕರಿಗೂ ಅಮಿತ್‌ ಶಾ ಸಂದೇಶ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರಕಾರ ಅಸ್ತಿತ್ವದಲ್ಲಿದ್ದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಹಿನ್ನಡೆಯ ಆತಂಕವಿದೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸೀಟು ತಂದುಕೊಡುವ ರಾಜ್ಯ ಕರ್ನಾಟಕವಾಗಿದ್ದು, ಈ ಅವಕಾಶ ಕಳೆದುಕೊಳ್ಳಲು ಮೋದಿ-ಶಾ ಜೋಡಿ ತಯಾರಿಲ್ಲ. ಹಾಗಾಗಿ ದೋಸ್ತಿ ಸರಕಾರವನ್ನೇ ಉರುಳಿಸುವ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲಾಗಿದೆ. ಈ ರಹಸ್ಯ ಕಾರ್ಯಸೂಚಿ ಜಾರಿಗೊಳಿಸಲು ಅಮಿತ್‌ ಶಾ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ರಮೇಶ್‌ ಜಾರಕಿಹೊಳಿ ಹಾಗೂ ಇತರರು ಸೋಮವಾರದ ಹೊತ್ತಿಗೆ ರಾಜ್ಯಕ್ಕೆ ಮರಳಲಿದ್ದಾರೆ. ಇದರ ಬೆನ್ನಿಗೇ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಯಾಗಲಿದೆ ಎನ್ನಲಾಗುತ್ತಿದೆ.

ಅಸ್ಥಿರ ಮೊದಲ ಗುರಿ
ಸದ್ಯಕ್ಕೆ ದೋಸ್ತಿ ಸರಕಾರವನ್ನು ಅಸ್ಥಿರಗೊಳಿಸುವುದೇ ಬಿಜೆಪಿಯ ಮೊದಲ ಗುರಿಯಾಗಿದೆ. 2-3 ಹಂತದಲ್ಲಿ ಕಾಂಗ್ರೆಸ್‌ನ ಬಂಡಾಯ ಶಾಸಕರು ರಾಜೀನಾಮೆ ಸಲ್ಲಿಸಲಿದ್ದಾರೆ. ಈ ಮೂಲಕ ಸರಕಾರ ಅಲ್ಪಮತಕ್ಕೆ ಕುಸಿಯುವಂತೆ ನೋಡಿಕೊಳ್ಳುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಸರಕಾರ ಅಲ್ಪಮತಕ್ಕೆ ಕುಸಿದು ಡೋಲಾಯಮಾನ ಸ್ಥಿತಿಗೆ ತಲುಪಿದಾಗ ಅಸಲಿ ಆಟ ಶುರುಹಚ್ಚಿಕೊಳ್ಳುವುದು ಬಿಜೆಪಿಯ ಯೋಚನೆಯಾಗಿದೆ. ಅಲ್ಲಿಯವರೆಗೂ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್‌ನ ಅತೃಪ್ತರೊಂದಿಗೆ ಕಾಣಿಸಿಕೊಳ್ಳಬಾರದು. ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕು. ಈ ಅತೃಪ್ತರನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ದಿಲ್ಲಿಯಿಂದಲೇ ನಿಭಾಯಿಸಲಾಗುವುದು ಎಂಬ ಸೂಚನೆಯನ್ನು ಶಾ ಕೊಟ್ಟಿದ್ದಾರೆಂದು ತಿಳಿದು ಬಂದಿದೆ.

ಬಿಜೆಪಿ ವರಿಷ್ಠರು ಸಿದ್ಧಪಡಿಸಿದ ‘ನೀಲ ನಕ್ಷೆ’ಯಂತೆ ಮೊದಲ ಹಂತದಲ್ಲಿ ಅರ್ಧ ಡಜನ್‌ ಶಾಸಕರು ರಾಜೀನಾಮೆ ನೀಡಲಿದ್ದಾರೆ. 2 ಮತ್ತು 3ನೇ ಹಂತದಲ್ಲೂ ಇಷ್ಟೇ ಸಂಖ್ಯೆಯ ಶಾಸಕರಿಂದ ರಾಜೀನಾಮೆ ಕೊಡಿಸುವ ಪ್ಲ್ಯಾನ್‌ ರೆಡಿಯಿದೆ ಎಂದು ಹೇಳಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment