ರಾಜಕೀಯ

ಕೈ ಶಾಸಕರ ಅಸಹಕಾರ: ಬೆಂಗಳೂರು ಉತ್ತರ ಕೈಬಿಟ್ಟ ಜೆಡಿಎಸ್

ಬೆಂಗಳೂರು: ಪಟ್ಟುಹಿಡಿದು ಕ್ಷೇತ್ರ ಪಡೆದುಕೊಂಡರೂ ಸಮರ್ಥ ಅಭ್ಯರ್ಥಿ ಕೊರತೆ ಕಾರಣಕ್ಕೆ ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‌ ಮಿತ್ರಪಕ್ಷ ಕಾಂಗ್ರೆಸ್‌ಗೆ ಒಪ್ಪಿಸಿದೆ. ತುಮಕೂರು ಅಥವಾ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಬಯಸಿದ್ದ ದೇವೇಗೌಡರು ಅಂತಿಮವಾಗಿ ತುಮಕೂರು ಆಯ್ಕೆ ಮಾಡಿಕೊಂಡಿದ್ದರು.

ಪಕ್ಷದ ಪಾಲಿಗೆ ಸ್ಪರ್ಧೆಗೆ ಮುಕ್ತವಾಗಿದ್ದ ಬೆಂಗಳೂರು ಉತ್ತರದಲ್ಲಿ ಗೆಲ್ಲುವ ಅವಕಾಶ ಬಿಟ್ಟುಕೊಡಬಾರದು ಎಂಬ ಕಾರಣಕ್ಕೆ ಮಿತ್ರಪಕ್ಷದ ತೆಕ್ಕೆಗೆ ಒಪ್ಪಿಸಿದ್ದಾರೆ. ಬಿ.ಎಂ.ಫರೂಕ್‌, ಕುಪೇಂದ್ರರೆಡ್ಡಿ ಸೇರಿ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಜೆಡಿಎಸ್‌ನಲ್ಲಿ ಹಲವು ಆಕಾಂಕ್ಷಿಗಳಿದ್ದರು. ಆದರೆ, ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮಾತ್ರ ಗೆಲ್ಲುವ ಅವಕಾಶ ಹೆಚ್ಚು ಎಂಬ ಲೆಕ್ಕಾಚಾರದಲ್ಲಿದ್ದ ದೇವೇಗೌಡರು, ಕೃಷ್ಣ ಬೈರೇಗೌಡ ಅಭ್ಯರ್ಥಿಯಾದರೆ ಸೂಕ್ತ ಎಂಬ ಸಲಹೆಯೊಂದಿಗೆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ತೀರ್ಮಾನ ಕೈಗೊಂಡರು ಎನ್ನಲಾಗಿದೆ.
ಕೈ ಶಾಸಕರ ಅಸಹಕಾರ: ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಡೆಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಇಬ್ಬರು ಮಾತ್ರ ಜೆಡಿಎಸ್‌ ಶಾಸಕರು. ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸಿದರೆ ಸಹಕಾರ ನೀಡುವ ಮತ್ತು ಕೆಲಸ ಮಾಡುವ ಸ್ಪಂದನೆ ಮಿತ್ರಪಕ್ಷದ ಶಾಸಕರಿಂದ ಸಿಗಲಿಲ್ಲ. ಜತೆಗೆ, ಕಾಂಗ್ರೆಸ್‌ ಶಾಸಕರು ನಿರೀಕ್ಷಿಸುವ ಪ್ರಮಾಣದಲ್ಲಿ ಸಂಪನ್ಮೂಲ ಹೊಂದಿಸುವ ಸವಾಲನ್ನು ತೆಗೆದುಕೊಳ್ಳಲು ದೇವೇಗೌಡರು ಸಿದ್ದರಿರಲಿಲ್ಲ. ಮಿತ್ರಪಕ್ಷದ ಶಾಸಕರನ್ನು ಮನವೊಲಿಸುವ ವ್ಯರ್ಥ ಪ್ರಯತ್ನಕ್ಕಿಂತ ಅದೇ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟುಕೊಡುವುದು ಸೂಕ್ತ ಎಂಬ ನಿರ್ಧಾರಕ್ಕೆ ದೇವೇಗೌಡರು ಬಂದರು ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment