ಕ್ರೀಡೆ

ಕೊಹ್ಲಿ, ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ ಮಿಥಾಲಿ ರಾಜ್

ನವದೆಹಲಿ: ಮಹಿಳಾ ಕ್ರಿಕೆಟ್ ನ ಸಚಿನ್ ಎಂದೇ ಖ್ಯಾತಿ ಗಳಿಸಿರುವ ಮಿಥಾಲಿ ರಾಜ್, ಇದೀಗ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದು, ಭಾರತದ ಕ್ರಿಕೆಟ್ ಸೆನ್ಸೇಷನ್ ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ದಾಖಲೆಯೊಂದನ್ನು ಧೂಳಿಪಟ ಮಾಡಿದ್ದಾರೆ.
ಹೌದು.. ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.  ಐರ್ಲೆಂಡ್ ವಿರುದ್ಧ ಅರ್ಧಶತಕದೊಂದಿಗೆ ಮಿಥಾಲಿ ರಾಜ್ ಟಿ20 ಮಾದರಿಯ ಕ್ರಿಕೆಟ್ ನಲ್ಲಿ ತಮ್ಮ ರನ್ ಗಳಿಕೆಯನ್ನು 2283ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಗಳಿಕೆ ಮಾಡಿದ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇನ್ನು ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರ ಸ್ಥಾನಿಯಾಗಿದ್ದರು, ರೋಹಿತ್ ಒಟ್ಟು 2207ರನ್ ಗಳಿಸಿದ್ದು, ಆ ಬಳಿಕದ ಸ್ಥಾನದಲ್ಲಿ 2102 ರನ್ ಗಳಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಇದೀಗ ಈ ಇಬ್ಬರೂ ಘಟಾನುಘಟಿ ಆಟಗಾರರನ್ನು ಹಿಂದಿಕ್ಕಿರುವ ಮಿಥಾಲಿ ರಾಜ್ ಅತೀ ಹೆಚ್ಚು ರನ್ ಗಳಿಸಿದ ಆಟಾಗರರ ಪಟ್ಟಿಯಲ್ಲಿ ಆಗ್ರ ಸ್ಥಾನಕ್ಕೇರಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ನಾಲ್ಕನೇ ಸ್ಥಾನದಲ್ಲಿದ್ದು, ಹರ್ಮನ್ ಪ್ರೀತ್ ಒಟ್ಟು 1827ರನ್ ಗಳಿಸಿದ್ದಾರೆ. ಆ ಬಳಿಕದ ಸ್ಥಾನದಲ್ಲಿ 1605 ರನ್ ಗಳಿಸಿರುವ ಸುರೇಶ್ ರೈನಾ ಇದ್ದು, 6ನೇ ಸ್ಥಾನದಲ್ಲಿ 1487 ರನ್ ಗಳಿಸಿರುವ ಎಂಎಸ್ ಧೋನಿ ಇದ್ದಾರೆ. ಒಟ್ಟಾರೆ ಪುರುಷ ಕ್ರಿಕೆಟಿಗರಿಗಿಂತ ತಾವೂ ಏನೂ ಕಡಿಮೆ ಇಲ್ಲ ಎಂಬುದನ್ನು ಮಿಥಾಲಿ ಮತ್ತು ಹರ್ಮನ್ ಪ್ರೀತ್ ಕೌರ್ ಸಾಬೀತು ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment