ರಾಷ್ಟ್ರ ಸುದ್ದಿ

ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ನವದೆಹಲಿ: ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ಗ್ರೀನ್ ಸಿಗ್ನಲ್ ನೀಡಿದ್ದು, ಸಾರ್ವಜನಿಕರಿಗೆ ನೇರ ಪ್ರಸಾರ ಮಾಡುವ ಮುನ್ನ ಕೂಡಲೇ ಅಗತ್ಯ ಕಾನೂನನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಮೂಲಕ ಮಹತ್ವದ ತೀರ್ಪನ್ನು ನೀಡಿದೆ. ಸಾರ್ವಜನಿಕ ಹಿತಾಸಕ್ತಿಯ ಸೇವೆ ಹಾಗೂ ಪಾರದರ್ಶಕತೆಯ ದೃಷ್ಟಿಯಿಂದ ಕೋರ್ಟ್ ಕಲಾಪದ ನೇರ ಪ್ರಸಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೂರ್ಯ ಕಿರಣ ಉತ್ತಮವಾದ ಕೀಟನಾಶಕ ಎಂಬಂತೆ, ನ್ಯಾಯಾಲಯಗಳ ಗೋಡೆಗಳ ನಡುವೆ ನಡೆಯುವ ಕಲಾಪಗಳು ಹೇಗೆ ನಡೆಯುತ್ತಿದೆ ಎಂಬ ಪ್ರಥಮ ಮಾಹಿತಿ ಜನರಿಗೆ ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಕೋರ್ಟ್ ಕಲಾಪದ ನೇರ ಪ್ರಸಾರಕ್ಕೆ ಅನುಮತಿ ನೀಡಿದೆ.

ನೇರ ಪ್ರಸಾರಕ್ಕೆ ಕಾನೂನನ್ನು ಅನುಸರಿಸಬೇಕು. ಕೋರ್ಟ್ ಕಲಾಪಗಳ ನೇರ ಪ್ರಸಾರದ ಮೂಲದ ನ್ಯಾಯಾಲಯಗಳ ಕಾರ್ಯಕಲಾಪಕ್ಕೆ ಹೊಣೆಗಾರಿಕೆಯನ್ನು ತರಲಿದೆ ಎಂದು ಸುಪ್ರೀಂಕೋರ್ಟ್ ಪೀಠದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ ಸೂಕ್ಷ್ಮ ಪ್ರಕರಣವಾದ ಅತ್ಯಾಚಾರ ಹಾಗೂ ವೈವಾಹಿಕ ಸಂಬಂಧಿ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಮುಖ್ಯ ನ್ಯಾಯಮೂರ್ತಿ ಮಿಶ್ರಾ ತಿಳಿಸಿದ್ದಾರೆ. ನ್ಯಾಯಾಲಯಗಳ ಕಲಾಪದ ನೇರ ಪ್ರಸಾರ ವಿದ್ಯಾರ್ಥಿಗಳಿಗೆ ಕಲಿಯುವ ನಿಟ್ಟಿನಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಪೀಠ ಹೇಳಿದೆ.

 

About the author

ಕನ್ನಡ ಟುಡೆ

Leave a Comment