ರಾಷ್ಟ್ರ ಸುದ್ದಿ

ಕೋಲ್ಕತಾದಲ್ಲಿ ಪ್ರತಿಪಕ್ಷಗಳ ಸಮಾವೇಶ: ಮಮತಾಗೆ ಒಗ್ಗಟ್ಟಿನ ಪತ್ರ ಬರೆದ ರಾಹುಲ್

ನವದೆಹಲಿ: ಜನವರಿ 19ರಂದು ಕೋಲ್ಕತಾದಲ್ಲಿ ಪ್ರತಿಪಕ್ಷಗಳ ‘ಒಗ್ಗಟ್ಟು ಪ್ರದರ್ಶನ’ಕ್ಕೆ ವೇದಿಕೆ ಸಿದ್ಧಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ.
ಈ ಸಂಬಂಧ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ಶನಿವಾರ ಕೋಲ್ಕತಾದಲ್ಲಿ ನಡೆಯುವ ಒಕ್ಕೂಟ ಭಾರತ ಸಮಾವೇಶಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಮೇನಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರೋಧಿ ಪಕ್ಷಗಳು ಬೃಹತ್​ ಮಟ್ಟದಲ್ಲಿ ಒಂದಾಗಲಿವೆ. “ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕಿದೆ,” ಎಂದು ರಾಹುಲ್​ ಗಾಂಧಿ ಅವರು ಮಮತಾ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಮಮತಾ ದೀದಿಗೆ ನಾನು ನನ್ನ ಸಹಕಾರವನ್ನು ಮುಂದುವರೆಸುತ್ತೇನೆ. ಈ ಮೂಲಕ ನಮ್ಮ ಒಗ್ಗಟ್ಟಿನ ಬಲವನ್ನು ಮತ್ತು ಶಕ್ತಿಶಾಲಿ ಸಂದೇಶವನ್ನು ಸಾರಬೇಕಿದೆ ಎಂದು ರಾಹುಲ್ ಪತ್ರದಲ್ಲಿ ತಿಳಿಸಿದ್ದಾರೆ. ಒಟ್ಟಾರೆ ವಿರೋಧ ಪಕ್ಷಗಳ ಒಕ್ಕೂಟ ನಿಜವಾದ ರಾಷ್ಟ್ರೀಯತೆಯನ್ನು ಎತ್ತಿಹಿಡಿಯಲಿದೆ. ಬಿಜೆಪಿ ಮತ್ತು ಮಿಸ್ಟರ್​ ಮೋದಿ (ಪ್ರಧಾನಿ ನರೇಂದ್ರ ಮೋದಿ) ಅವರಿಂದ ಹಾಳಾಗಿರುವ ಸಾಮಾಜಿಕ ನ್ಯಾಯವನ್ನು ಪ್ರಜಾಪ್ರಭುತ್ವದ ಆಧಾರದ ಮೇಲೆ ಅಭಿವೃದ್ಧಿಗೊಳಿಸುವುದು ನಮ್ಮ ಆಶಯ ಎಂದು ರಾಹುಲ್ ಹೇಳಿದ್ದಾರೆ. ನಾಳೆ ನಡೆಯುವ ಒಕ್ಕೂಟ ಭಾರತ ಸಮಾವೇಶಕ್ಕೆ ರಾಹುಲ್ ಗಾಂಧಿ ಅವರು ಗೈರು ಆಗುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪರವಾಗಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಹಾಜರಾಗಲಿದ್ದಾರೆ.

About the author

ಕನ್ನಡ ಟುಡೆ

Leave a Comment