ರಾಜ್ಯ ಸುದ್ದಿ

ಕ್ರಿಯಾ ಸಮಾಧಿಯ ಗದ್ದುಗೆಯಲ್ಲಿ ಶಿವನಾಗಿ ಪವಡಿಸಿದ ಶ್ರೀ ಶಿವಕುಮಾರ ಸ್ವಾಮಿಜಿ

ತುಮಕೂರು: ಲಿಂಗಾಯತ ಸಂಪ್ರದಾಯದಲ್ಲಿ ಶವವನ್ನು ಶಿವವಾಗಿಸುವ ಕ್ರಿಯೆಗೆ ಕ್ರಿಯಾ ಸಮಾಧಿ ಎನ್ನುತ್ತಾರೆ. ತಮ್ಮ ಜೀವಿತದ ಶತಮಾನ ಕಾಲ ಇಷ್ಟಲಿಂಗ ಪೂಜಿಸಿ ಆಧ್ಯಾತ್ಮದ ಔನ್ನತ್ಯ ಸಾಧಿಸಿದ ಶ್ರೀ ಶಿವಕುಮಾರ್‌ ಸ್ವಾಮೀಜಿಗಳಿಗೆ ಮಂಗಳವಾರ ಶ್ರೀಮಠದ ಆವರಣದಲ್ಲಿಯೇ ಕ್ರಿಯಾ ಸಮಾಧಿ ನೆರವೇರಿಸುವ ಮೂಲಕ, ನೆರೆದಿದ್ದ ಸಾವಿರಾರು ಭಕ್ತರು ಅವರನ್ನು ಪರಶಿವನ ಸನ್ನಿಧಾನಕ್ಕೆ ಕಳುಹಿಸಿಕೊಟ್ಟರು.

ಶತಾಯುಷಿ ಶಿವಕುಮಾರ ಶ್ರೀಗಳಿಗೆ ದೀಕ್ಷೆ ನೀಡಿದ ಉದಾಟಛಿನ ಶಿವಯೋಗಿಗಳ ಗದ್ದುಗೆ ಪಕ್ಕದಲ್ಲಿಯೇ ಶತಾಯಷಿ ಶ್ರೀಗಳು ಪವಡಿಸಿದರು. ಮೂರುಅಡಿ ಅಗಲ, ನಾಲ್ಕೂವರೆ ಅಡಿ ಆಳದ ತ್ರಿಭುಜಾಕೃತಿಯ, ಅಷ್ಟಾವರಣ ಸಮಾಧಿಯೇ ಇನ್ನು ಮುಂದೆ ಶಿವಕುಮಾರ ಶ್ರೀಗಳ ಗದ್ದುಗೆ. ಸ್ವಾಮೀಜಿ ನಿತ್ಯ ಓಡಾಡುತ್ತಿದ್ದ ತೇರಿನ ಬೀದಿಯಲ್ಲೇ ಈ ಭವನವಿದೆ. ಶ್ರೀಗಳ ಇಚ್ಚೆಯಂತೆ, ಅವರು ಬಯಸಿದ ವಾಸ್ತುವಿನ ಪ್ರಕಾರವೇ, ಅಮೃತಶಿಲೆಯಲ್ಲಿ ನಿರ್ಮಾಣಗೊಂಡಿರುವ ಕ್ರಿಯಾ ಸಮಾಧಿ ಗದ್ದುಗೆ, ಅವರು ಬದುಕಿದ್ದಾಗಲೇ ನಿರ್ಮಾಣವಾಗಿತ್ತು 1982ರಲ್ಲಿ ಕನಕಪುರದ ದೇಗುಲ ಮಠದ ಇಮ್ಮಡಿ ಮಹಾಲಿಂಗ ಸ್ವಾಮೀಜಿ ಈ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

ಮಹಾಲಿಂಗ ಸ್ವಾಮೀಜಿ ಮತ್ತು ಶಿವಕುಮಾರಸ್ವಾಮಿಜಿ ಉದ್ಧಾನ ಶಿವಯೋಗಿಗಳ ಶಿಷ್ಯರಾಗಿದ್ದರು. ಹಾಗಾಗಿ, ಮಹಾಲಿಂಗ ಸ್ವಾಮೀಜಿ ಅವರ ಕೈಯಿಂದಲೇ ಭವನಕ್ಕೆ ಭೂಮಿ ಪೂಜೆ ಮಾಡಿಸಬೇಕು ಎನ್ನುವ ಆಸೆ ಶಿವಕುಮಾರ ಸ್ವಾಮೀಜಿಯವರದ್ದಾಗಿತ್ತು. ಎರಡು ವರ್ಷದ ಹಿಂದೆ ಭವನದ ಕಾಮಗಾರಿ ಪೂರ್ಣವಾಗಿತ್ತು. ಭವನದ ಮೇಲಿನ ನಾಲ್ಕು ಮೂಲೆಗಳಲ್ಲಿ ಕರಡಿಗೆಯ ರೂಪವನ್ನು ಕೆತ್ತಲಾಗಿದೆ.

ಈಗ ಭವನ ನಿರ್ಮಿಸಲಾದ ಜಾಗದಲ್ಲಿ ಬೃಹತ್ತಾದ ಆಲದ ಮರವೊಂದು ಇತ್ತು. ಮರವನ್ನು ಕಡಿದು ಆ ಜಾಗದಲ್ಲಿ ಭವನ ನಿರ್ಮಿಸಲು ಶಿವಕುಮಾರ ಸ್ವಾಮೀಜಿ ಅವರಿಗೆ ಇಷ್ಟವಿರಲಿಲ್ಲ. ಆಶ್ಚರ್ಯ ಎನ್ನುವಂತೆ ಒಂದು ದಿನ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಆ ಆಲದ ಮರ ಧರೆಗುರುಳಿತ್ತು. ನಂತರ ಭವನ ನಿರ್ಮಾಣ ಹಾದಿ ಸುಗಮವಾಗಿತ್ತು.

ಹೇಗಿತ್ತು ಕ್ರಿಯಾ ಸಮಾಧಿ? ಲಿಂಗೈಕ್ಯರಾದ ಶ್ರೀಗಳ ಪಾರ್ಥೀವ ಶರೀರವನ್ನು ಕೂರಿಸಿದ ಸಮಾಧಿಯ ಕೆಳಭಾಗದಲ್ಲಿ ವಿಭೂತಿ ಗಟ್ಟಿ ಹಾಗೂ ಮರಳು ಉಪ್ಪು ಹಾಕಲಾಯಿತು. ಶ್ರೀಗಳ ಶಿರ ಭಾಗವನ್ನು ಬಿಲ್ವಪತ್ರೆಗಳಿಂದ ಮುಚ್ಚಿ, ಮೃತ್ತಿಕೆ(ಪವಿತ್ರವಾದ ಮಣ್ಣು) ಹಾಕಿ ಕಲ್ಲು ಹಾಸು ಹೊದಿಸಲಾಗಿತ್ತು. ದೇಹವನ್ನು ಸಾಧಾರಣ ಮಣ್ಣಿನಿಂದ ಮುಚ್ಚದೇ ವಿಭೂತಿ ಮತ್ತು ಉಪ್ಪಿನಿಂದ ಮುಚ್ಚುವುದೇ ಕ್ರಿಯಾ ಸಮಾಧಿಯ ವಿಶೇಷ. ಹಾಗಾಗಿ ಶ್ರೀಗಳ ಕ್ರಿಯಾ ಸಮಾಧಿಗೆ 300 ಬಾಕ್ಸ್‌ ವಿಭೂತಿ ಗಟ್ಟಿ, 5 ಚೀಲ ಉಪ್ಪು, ಬಿಲ್ವಪತ್ರೆ, 50 ಚೀಲ ಮರಳನ್ನು ಬಳಸಲಾಗಿದೆ. ಜತೆಗೆ ಬಿಲ್ವಪತ್ರೆ, ನಾನಾ ವಿಧದ ಹೂವುಗಳನ್ನು ಬಳಕೆ ಮಾಡಲಾಗಿದೆ. ಕ್ರಿಯಾ ಸಮಾಧಿ ಗದ್ದುಗೆ ಹೊರಗಡೆ ಹಸಿರು ಚಪ್ಪರ ನಿರ್ಮಾಣ, ಗದ್ದುಗೆ ಮಂದಿರಕ್ಕೆ ಶಿವಪಂಚಾಕ್ಷರಿ ಮಂತ್ರದ ಹೂವಿನ ಅಲಂಕಾರ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment