ಸುದ್ದಿ

ಕ್ಷಯರೋಗ(ಟಿಬಿ)ದಿಂದಲೂ ದೇಶವನ್ನು ಮುಕ್ತಗೊಳಿಸಲು ಸರ್ಕಾರ ಕ್ರಮ.

ಬೆಂಗಳೂರು:  2025ರ ವೇಳೆಗೆ ಕ್ಷಯರೋಗ(ಟಿಬಿ)ದಿಂದಲೂ ದೇಶವನ್ನು ಮುಕ್ತಗೊಳಿಸಲು ಸರ್ಕಾರ ಮುಂದಾಗಿದೆ.

2017ರ ವರೆಗಿನ ಅಂಕಿಅಂಶದ ಪ್ರಕಾರ ಕರ್ನಾಟಕದಲ್ಲಿ 67 ಸಾವಿರ ಜನರಲ್ಲಿ ಟಿಬಿ ಪತ್ತೆ ಹಚ್ಚಲಾಗಿದ್ದು, ಶೇಕಡ 85 ಮಂದಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಲಾಗಿದೆ. 1 ಸಾವಿರ ಮಂದಿಯನ್ನು ತೀವ್ರ ಕ್ಷಯ ರೋಗಿಗಳಾಗಿ ಗುರುತಿಸಲಾಗಿದೆ. ರಾಜ್ಯದಲ್ಲಿ ಅಂದಾಜು 6.5 ಲಕ್ಷ ಮಂದಿ ಕ್ಷಯ ರೋಗಕ್ಕೆ ತುತ್ತಾಗಿರುವ ಸಾಧ್ಯತೆಗಳಿದ್ದರೂ, ಇಲಾಖೆ ಬಳಿ ಸಂಪೂರ್ಣ ದಾಖಲೆಗಳು ಲಭ್ಯವಿಲ್ಲ.

ಮಾಸಿಕ 500 ರೂ. ಆರ್ಥಿಕ ಸಹಾಯ

ಕ್ಷಯರೋಗ ಇರುವ ರೋಗಿಗಳಿಗೆ ಪೌಷ್ಠಿಕ ಆಹಾರ ಸೇವನೆಗಾಗಿ ಮಾಸಿಕ 500 ರೂ. ನೆರವು ನೀಡಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ಚಿಕಿತ್ಸೆ ಪಡೆಯುವವರಿಗೆ 6 ತಿಂಗಳು, 2ನೇ ಹಂತದಲ್ಲಿ 8 ತಿಂಗಳು, ಹಾಗೂ ಔಷಧ ಪ್ರತಿರೋಧಕ ಹೊಂದಿರುವವರಿಗೆ 2 ವರ್ಷಗಳ ಕಾಲ ಉಚಿತ ಔಷಧಗಳೊಂದಿಗೆ ಪೌಷ್ಠಿಕ ಆಹಾರ ಸೇವಿಸಲು ಮಾಸಿಕ 500 ರೂ. ನೀಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರೋಗಿಗಳ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸುವ ಕೆಲಸಕ್ಕೆ ಇಲಾಖೆ ಮುಂದಾಗಿದೆ.

”ರಾಜ್ಯಕ್ಕೆ 120 ಕೋರ್ಸ್ ಹೊಸ ಔಷಧಗಳನ್ನು ಕೇಳಲಾಗಿದೆ. ಇದರಲ್ಲಿ ಸದ್ಯಕ್ಕೆ 50 ಕೋರ್ಸ್​ಗಳು ಬಂದಿವೆ. ಡೆಲಮಿನೆಡ್ ಕೆಲ ದಿನಗಳಲ್ಲಿ ಬೆಂಗಳೂರು ತಲುಪಲಿದೆ. ಹೊಸ ಔಷಧಗಳು ಆಯ್ದ ರೋಗಿಗಳಿಗೆ ಉಚಿತವಾಗಿಯೇ ಲಭ್ಯವಾಗಲಿವೆ. ಕ್ಷಯರೋಗ ನಿಮೂಲನೆ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ”.

| ಡಾ. ರಾಮಚಂದ್ರ ಭೈರಿ ಆರೊಗ್ಯ ಇಲಾಖೆ ಕ್ಷಯರೋಗ ವಿಭಾಗದ ಜಂಟಿ ನಿರ್ದೇಶಕ

 

ಬೆಡಾಕ್ವಿಲಿನ್ ಹಾಗೂ ಡೆಲಮಿನೆಡ್ ಎಂಬ 2 ಬಗೆಯ ಮಾತ್ರೆಗಳನ್ನು ಗಂಭೀರ ಕ್ಷಯ ರೋಗಿಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ರಾಜ್ಯದ 50 ರೋಗಿಗಳಿಗಾಗಿ ಈ ಹೊಸ ಔಷಧಗಳನ್ನು ಕಳುಹಿಸಿಕೊಡಲಾಗಿದೆ. ಒಟ್ಟಾರೆ 1 ಸಾವಿರ ರೋಗಿಗಳಿಗೆ ಲಭ್ಯವಾಗುವಷ್ಟು ಹೊಸ ಔಷಧಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ದೇಶಕ್ಕೆ ಸಿಕ್ಕಿದೆ.

ಹೊಸ ಔಷಧಗಳು ತುಟ್ಟಿಯಾಗಿರುವ ಹಿನ್ನೆಲೆಯಲ್ಲಿ ನುರಿತ ವೈದ್ಯರನ್ನು ಹೊಂದಿದ ಸಮಿತಿ ರಚಿಸಿ, ರೋಗಿಗಳನ್ನು ಸಂಪೂರ್ಣ ಪರೀಕ್ಷೆ ನಡೆಸಿದ ಬಳಿಕ ಬೆಡಾಕ್ವಿಲಿನ್ ಔಷಧ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

 

About the author

ಕನ್ನಡ ಟುಡೆ

Leave a Comment