ರಾಜಕೀಯ

ಖಾತೆ ಹಂಚಿಕೆ ಕಸರತ್ತು ಬಳಿಕ ಕಾಂಗ್ರೆಸ್’ಗೆ ಎದುರಾಯ್ತು ಹೊಸ ತಲೆನೋವು

ಬೆಂಗಳೂರು: ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಬಳಿಕ ಇದೀಗ ಕಾಂಗ್ರೆಸ್ ಪಾಳಯಕ್ಕೆ ಮತ್ತೊಂದು ಹೊಸ ತಲೆನೋವು ಶುರುವಾಗಿದೆ. ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ರಾಜ್ಯದ ಆಡಳಿತಾರೂಢ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಯಿಂದ ನನ್ನನ್ನು ಕೈಬಿಟ್ಟಿರವುದು ಗಮನಕ್ಕೆ ಬಂದಿಲ್ಲ. ಒಂದು ವೇಳೆ ಇದು ಸತ್ಯವಾದರೆ ಸಾರ್ವಜನಿಕ ಜೀವನದಲ್ಲಿರುವ ನನಗೆ ಅವಮಾಕಾರಿ ಎಂದೇ ಪರಿಗಣಿಸಬೇಕಾಗುತ್ತದೆ. ಹೀಗಾಗಿ ಮುಂದೆ ಯಾವ ಹೆಜ್ಜೆ ಇಡುತ್ತೇನೆ ಎಂಬುದನ್ನು ಕಾದು ನೋಡಿ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಅವರು ಎಚ್ಚರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಧಾಕರ್ ಅವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡದಂತೆ ಹೇಳಿದ್ದಾರೆಂಬ ಸುದ್ದಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಸುಧಾಕರ್ ಅವರು ಮಾತನಾಡಿದ್ದಾರೆ.
ನನಗೆ ಮಂಡಳಿ ಅಧ್ಯಕ್ಷ ಸ್ಥಾನ ದೊರೆತಿದೆ ಎಂದು ಸಾರ್ವಜನಿಕರು ಬಂದು ಅಭಿನಂದನೆ ಸಲ್ಲಿಸಿದ್ದಾರೆ. ಒಂದು ವೇಳೆ ಇದೀಗ ಹುದ್ದೆ ತಪ್ಪಿಸಿದರೆ, ಸಾರ್ವಜನಿಕ ಬದುಕಿನಲ್ಲಿ ನನಗೆ ಅವಮಾನ ಮಾಡಿದಂತಾಗಲಿದೆ. ನನ್ನ ಕ್ಷೇತ್ರದ ಜನರಿಗೂ ಅನ್ಯ ರೀತಿಯ ಸಂದೇಶ ಹೋಗಲಿದೆ. ನನಗೆ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನನ್ನನ್ನು ಕೈಬಿಟ್ಟಿರುವುದು ಖಚಿತಪಟ್ಟಿಲ್ಲ. ಈ ಬಗ್ಗೆ ವೇಣುಗೋಪಾಲ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬೇರೆಯವರ ಜೊತೆ ಈ ಬಗ್ಗೆ ಮಾತನಾಡಿದ್ದು, ವೇಣುಗೋಪಾಲ್ ಅವರ ಜೊತೆ ಮಾತನಾಡುವವರೆಗೂ ಇದು ಅಧಿಕೃತವಲ್ಲ. ನಮ್ಮ ಹಿರಿಯ ನಾಯಕರೇ ನನಗೆ ಹುದ್ದೆ ನೀಡಿದ್ದಾರೆ. ನಮ್ಮ ಪಕ್ಷದವರು ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ಬೇರೆಯವರ ಬಗ್ಗೆ ನಮಗೆ ಗೊತ್ತಿಲ್ಲ. ಮೈತ್ರಿ ಧರ್ಮ ಪಾಲನೆಯಲ್ಲಿ ಕಾಂಗ್ರೆಸ್ ಪಕ್ಷದವರತ್ತ ಬೊಟ್ಟು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment