ಸಾಂಸ್ಕ್ರತಿಕ

ಗಂಡು ಕಲೆ ಎಂದೇ ಖ್ಯಾತಿಯಾದ ಕುಸ್ತಿ, ಅಖಾಡದಲ್ಲಿ ತೊಡೆ ತಟ್ಟಿದ ಜಟ್ಟಿಗಳು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಂಡು ಕಲೆ ಎಂದೇ ಖ್ಯಾತಿಯಾದ ಕುಸ್ತಿ  ವಿಜೃಂಭಿಸಿತು. ಅಖಾಡದಲ್ಲಿ ತಮ್ಮ ನೆಚ್ಚಿನ ಪೈಲ್ವಾನರನ್ನು ಕಂಡು ಪ್ರೇಕ್ಷಕರು ಜೈಕಾರದ ಘೋಷಣೆಗಳನ್ನು ಮೊಳಗಿಸುವ ಮೂಲಕ ಜಟ್ಟಿಗಳನ್ನು ಹುರಿದುಂಬಿಸಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ದಸರಾ ನಾಡ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ನಗರದ ದೊಡ್ಡಕೆರೆ ಮೈದಾನದಲ್ಲಿರುವ ಡಿ.ದೇವರಾಜ ಅರಸ್‌ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಫಕೀರ ಅಹಮದ್‌ ಸಾಹೇಬರ ಗರಡಿಯ ಪೈ.ಪ್ರವೀಣ ಚಿಕ್ಕಹಳ್ಳಿ ಮತ್ತು ಬೆಳಗಾವಿಯ ಪೈ.ಸಾಗರ ಎಲಡ್ಕಿ ಅವರಿಗೆ ಬೆನ್ನು ತಟ್ಟುವ ಮೂಲಕ ಕುಸ್ತಿ ಕಾಳಗದಲ್ಲಿ ಸೆಣಸಲು ಅವಕಾಶ ನೀಡಿದರು.

ನಂತರ ಮಾತನಾಡಿದ ಅವರು, ”ಮೈಸೂರಿನ ಒಡೆಯರು 1610ರಲ್ಲಿ ಪ್ರಥಮ ಬಾರಿಗೆ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ನಡೆಸಿದರು. ಸ್ವಾತಂತ್ರ್ಯ ಪೂರ್ವ ಮತ್ತು ನಂತರದದಲ್ಲಿ ಹಲವು ಕ್ರೀಡೆಗಳೊಂದಿಗೆ ಗ್ರಾಮೀಣ ಪ್ರದೇಶದ ಗಂಡು ಕಲೆಯಾದ ಕುಸ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸಿದರು. ಮೈಸೂರಿನ ಜನತೆ ಕೂಡ ಕುಸ್ತಿಯ ಬಗ್ಗೆ ಮೊದಲಿನಿಂದಲೂ ಅಭಿಮಾನ ಹೊಂದಿದ್ದು, ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಮ್ಮ ಸರಕಾರ ಕೂಡ ಕುಸ್ತಿ ಸೇರಿದಂತೆ ಎಲ್ಲ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡಲಿದೆ” ಎಂದು ಹೇಳಿದರು. ಶ್ರೀರಂಗಪಟ್ಟಣದ ಹಿರಿಯ ಕುಸ್ತಿಪಟು ಶ್ರೀಕಂಠು ಜ್ಯೋತಿ ಸ್ವೀಕರಿಸಿದರು. ಬುಧವಾರದ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ನಾನಾ ಕಡೆಯಿಂದ 60ಕ್ಕೂ ಹೆಚ್ಚು ಪೈಲ್ವಾನರು ಆಗಮಿಸಿ, ತೊಡೆ ತಟ್ಟಿದರು. ಅ. 16ರವರೆಗೆ ನಡೆಯಲಿರುವ ಕುಸ್ತಿ ಪಂದ್ಯಾವಳಿಗಳು ಪ್ರೇಕ್ಷಕರಿಗೆ ರಸದೌತಣ ನೀಡಲಿವೆ.

ರೋಚಕ ಮಾರ್ಫಿಟ್‌: ಮೊದಲ ದಿನದ ಮಾರ್ಫಿಟ್‌ ಕುಸ್ತಿಯಲ್ಲಿ ಉತ್ತರ ಪ್ರದೇಶದ ಪೈ.ಉಮೇಶ್‌ ಗೆಲುವಿನ ನಗೆ ಬೀರಿದರು. ಪುಣೆಯ ಪೈ, ಭಾರತ್‌ ಮದನೆ ಅವರನ್ನು 13 ನಿಮಿಷ 21 ಸೆಕೆಂಡ್‌ಗಳಲ್ಲಿ ಚಿತ್‌ ಮಾಡುವ ಮೂಲಕ ವಿಜಯಿಯಾದರು. ಇದಕ್ಕೂ ಮುನ್ನ ಪೈ.ಪ್ರವೀಣ್‌ ಚಿಕ್ಕಹಳ್ಳಿ ಮತ್ತು ಬೆಳಗಾವಿ ಪೈ.ಸಾಗರ ಎಲಡ್ಕಿ ನಡುವಿನ ಉದ್ಘಾಟನಾ ಕುಸ್ತಿ ಡ್ರಾನಲ್ಲಿ ಅಂತ್ಯಗೊಂಡಿತು.

About the author

ಕನ್ನಡ ಟುಡೆ

Leave a Comment