ರಾಜ್ಯ ಸುದ್ದಿ

ಗಗನಕ್ಕೇರಿದ ಎಲ್ ಪಿಜಿ ಸಿಲಿಂಡರ್ ಬೆಲೆ: ಬಡ, ಮಧ್ಯಮ ವರ್ಗದ ಜನತೆ ಕಂಗಾಲು

ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಅಡುಗೆ ಮಾಡುವಾಗ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ರಾಜ್ಯಾದ್ಯಂತ ಅಡುಗೆ ಅನಿಲ(ಎಲ್ ಪಿಜಿ ಸಿಲಿಂಡರ್) ಬೆಲೆ ಗಗನಕ್ಕೇರಿದೆ. 14.2 ಕೆ ಜಿ ತೂಕದ ಗೃಹ ಬಳಕೆ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿದೆ.ರಾಜಧಾನಿ ಬೆಂಗಳೂರಿನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 942ಕ್ಕೆ ಏರಿದ್ದರೆ, ಬೀದರ್ ಜಿಲ್ಲೆಯಲ್ಲಿ 14.2 ಕೆಜಿ ತೂಕದ ಸಿಲೆಂಡರ್ ಬೆಲೆ 1,017 ರೂಪಾಯಿಯಾಗಿದೆ.

ಕಳೆದ ಏಪ್ರಿಲ್ ನಲ್ಲಿ ಬೆಂಗಳೂರಿನಲ್ಲಿ ಎಲ್ ಪಿಜಿ ದರ ಸಿಲಿಂಡರ್ ಗೆ 652 ರೂಪಾಯಿಗಳಿತ್ತು. ಅದೀಗ ನಾಲ್ಕೈದು ತಿಂಗಳಲ್ಲಿ ಶೇಕಡಾ 40ರಷ್ಟು ಏರಿಕೆಯಾಗಿದೆ. ಈ ತಿಂಗಳು 941 ರೂಪಾಯಿಗೆ ಹೆಚ್ಚಳವಾಗಿದೆ.ರಾಮ ಮೂರ್ತಿ ನಗರ ನಿವಾಸಿ ಕನೀಸ್ ಫಾತಿಮಾ, ಕೇವಲ ಸಿಲೆಂಡರ್ ಬೆಲೆ ಮಾತ್ರವಲ್ಲ, ದಿನನಿತ್ಯ ಉಪಯೋಗಿ ವಸ್ತುಗಳ ಬೆಲೆ ಕೂಡ ಗಗನಕ್ಕೇರುತ್ತಿದೆ. ಎಲ್ ಪಿಜಿ ಬೆಲೆ ಹೆಚ್ಚಳವಾದರೆ ಬೇರೆ ವಸ್ತುಗಳ ಬೆಲೆ ಕೂಡ ಜಾಸ್ತಿಯಾಗುತ್ತದೆ ಎಂದು ಗೊಣಗುತ್ತಾರೆ.

ಇಂದಿರಾ ನಗರ ನಿವಾಸಿ ವೆಂಕಟೇಶ್ ರಾವ್, ಮಾರ್ಚ್ ತಿಂಗಳಿನಿಂದ ಪ್ರತಿ ತಿಂಗಳು 30 ರೂಪಾಯಿಗಳಂತೆ ಎಲ್ ಪಿಜಿ ಬೆಲೆ ಹೆಚ್ಚಳವಾಗುತ್ತಿದೆ. ಏಪ್ರಿಲ್ ನಲ್ಲಿ ಸುಮಾರು 650 ರೂಪಾಯಿಗಳಾಗಿದ್ದವು. ನಂತರ ಪ್ರತಿ ತಿಂಗಳು 40ರಿಂದ 50 ರೂಪಾಯಿ ಹೆಚ್ಚಳವಾಗುತ್ತಿತ್ತು. ನಮ್ಮಂತ ಸಣ್ಣ ವ್ಯಾಪಾರಿಗಳಿಗೆ ಬೆಲೆ ಹೆಚ್ಚಳದಿಂದ ವ್ಯಾಪಾರದ ಮೇಲೆ ಹೊಡೆತ ಬೀಳುತ್ತದೆ. ಸಬ್ಸಿಡಿ ಹಣ ನಮ್ಮ ಖಾತೆಗೆ ಸರಿಯಾದ ಸಮಯಕ್ಕೆ ಬರುವುದು ಕೂಡ ಇಲ್ಲ ಎನ್ನುತ್ತಾರೆ.ನ್ಯೂ ತಿಪ್ಪಸಂದ್ರ ರಸ್ತೆಯ ಬೀದಿ ಬದಿ ವ್ಯಾಪಾರಿ ಶೈಲಜಾ, ಮನೆಗೆ ಎಲ್ ಪಿಜಿ ತಂದುಕೊಟ್ಟದ್ದಕ್ಕೆ 990 ರೂಪಾಯಿ ಕೊಟ್ಟಿದ್ದೇನೆ. ಮುಂದಿನ ತಿಂಗಳು ಸಾವಿರ ರೂಪಾಯಿ ದಾಟಿದರೆ ಆಶ್ಚರ್ಯವಿಲ್ಲ ಎನ್ನುತ್ತಾರೆ.

ಆದರೆ ಬೀದರ್ ಜಿಲ್ಲೆಯಂತೆ ಬೆಂಗಳೂರಿನಲ್ಲಿ ಎಲ್ ಪಿಜಿಗೆ ಸಾವಿರ ರೂಪಾಯಿಗೆ ಹೋಗಲಿಕ್ಕಿಲ್ಲ. ಡಿಸೆಂಬರ್ ನಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ವಿತರಕರು ಹೇಳುತ್ತಾರೆ.ಬೀದರ್ ನ ಗ್ರಾಮ್ಲೆ ಹೆಚ್ ಪಿ ಗ್ಯಾಸ್ ಏಜನ್ಸಿಯ ಮಾಲೀಕ ಸಚಿನ್ ಗ್ರಾಮ್ಲೆ, ಅಕ್ಟೋಬರ್ ನಲ್ಲಿ 953 ಇದ್ದ ಸಿಲಿಂಡರ್ ಬೆಲೆ ನವೆಂಬರ್ ನಲ್ಲಿ 1.017ಕ್ಕೆ ಏರಿಕೆಯಾಯಿತು. ತಿಂಗಳು ತಿಂಗಳು ಬೆಲೆ ವ್ಯತ್ಯಾಸ ಕಾಣುತ್ತದೆ. ಮುಂದಿನ ತಿಂಗಳು ಕಡಿಮೆಯಾಗಬಹುದು. 2013ರಲ್ಲಿ ಕೂಡ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 1,300 ರೂಪಾಯಿಗೆ ಏರಿಕೆಯಾಗಿತ್ತು. ಅದರಲ್ಲಿ 700 ರೂಪಾಯಿ ವಾಪಸ್ ಖಾತೆಗೆ ಬರುತ್ತದೆ ಎಂದು ಹೇಳಿದರು.ಅಖಿಲ ಭಾರತ ಎಲ್ ಪಿಜಿ ವಿತರಕರ ಒಕ್ಕೂಟದ ಸದಸ್ಯ ಮೆಹುಲ್ ಪಟೇಲ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳದಿಂದ ಎಲ್ ಪಿಜಿ ಸಿಲೆಂಡರ್ ಬೆಲೆ ಕೂಡ ಜಾಸ್ತಿಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಕಾರಣವಾಗಿದೆ ಎಂದರು.

About the author

ಕನ್ನಡ ಟುಡೆ

Leave a Comment